ಬಂಟ್ವಾಳ: ಕಂಚಿನಡ್ಕ ಪದವು ಸರ್ಕಾರಿ ಜಾಗದಲ್ಲಿ ಕೆಂಪು ಕಲ್ಲಿನ ಕೋರೆ ನಿರ್ಮಿಸಿ ಬಳಿಕ ಕಲ್ಲು ತೆಗೆದು ಗುಂಡಿಯಾದ ಜಾಗವನ್ನು ಮಣ್ಣು ತುಂಬಿಸಿ ಮುಚ್ಚುವಂತೆ ಸರಕಾರ ಆದೇಶಿಸಿದ್ದರೂ, ಉಳ್ಳಾಲ ತಾಲೂಕಿನ ಇರಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಚಿನಡ್ಕ ಪದವು ಎಂಬಲ್ಲಿ ರಸ್ತೆಗೆ ತಾಗಿಕೊಂಡಿರುವ ಕಲ್ಲಿನ ಕೋರೆ ಇನ್ನು ಬಾಯ್ತೆರಿದು ನಿಂತಿದೆ. ಇದರಿಂದ ಸಾವುನೋವುಗಳಿಗೆ ಆಹ್ವಾನ ಸಿದ್ಧವಾಗಿದೆ.
ಮೃತ್ಯುಕೂಪದಂತಿರುವ ಈ ಕಲ್ಲು ಕೋರೆದ ಹೊಂಡಗಳು ಮಳೆಯಿಂದ ನೀರು ತುಂಬಿ ಕೆರೆಯಂತೆ ರೂಪುಗೊಂಡಿದ್ದು, ಅಪಾಯಕಾರಿಯಾಗಿದೆ. ಈ ಕೋರೆ ಪಕ್ಕದ ಮಾರ್ಗವಾಗಿ ಹೋಗುವ ವಾಹನ ಸವಾರರಿಗೂ ಜೀವಕ್ಕೆ ಕಂಟಕವಾಗಿದೆ.
ಆದಾಗ್ಯೂ, ಇರಾ ಗ್ರಾಮ ಪಂಚಾಯತ್ ಚಿಕ್ಕದೊಂದು ಎಚ್ಚರಿಕೆ ಫಲಕವನ್ನೂ ಅಳವಡಿಸಿಲ್ಲವೆಂಬುದು ವಿಷಾದನೀಯ ಸಂಗತಿ. ಸ್ಥಳೀಯರು “ಭಾರೀ ದುರಂತ ಸಂಭವಿಸುವ ಮುನ್ನ ತಕ್ಷಣವೇ ಎಚ್ಚರ ವಹಿಸಿ ಈ ಕೋರೆಯನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು” ಎಂದು ಇರಾ ಗ್ರಾಮ ಪಂಚಾಯತನ್ನು ಆಗ್ರಹಿಸಿದ್ದಾರೆ