ನವದೆಹಲಿ: ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯಲ್ಲಿ, ಪಾಕಿಸ್ತಾನದ ಒಳನುಗ್ಗಿ ಅಲ್ಲಿ ನೆಲೆಸಿದ್ದ ಭಯೋತ್ಪಾದಕರ ಶಿಬಿರಗಳನ್ನು ಭಾರತೀಯ ಪಡೆಗಳು ದ್ವಂಸಗೊಳಿಸಿದ್ದವು. ಇದರಿಂದಾಗಿ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿ, ಭಾರತವು ಪಾಕಿಸ್ತಾನದ ವಾಯುನೆಲೆಗಳು ಸೇರಿದಂತೆ ಹಲವು ತಾಣಗಳ ಮೇಲೆ ದಾಳಿ ನಡೆಸಿ ಪಾಕಿಸ್ತಾನಕ್ಕೆ ಭೀತಿಯ ಸಂದೇಶ ನೀಡಿತ್ತು.
ನಂತರ ಪಾಕಿಸ್ತಾನ ಭಾರತದ ಮುಂದೆ ಬೇಡಿಕೆ ಇಟ್ಟ ಪರಿಣಾಮ, ಕದನ ವಿರಾಮ ಘೋಷಿಸಿ ಯುದ್ಧವನ್ನು ನಿಲ್ಲಿಸಲಾಯಿತು. ಈ ವಿಚಾರದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಭಾರತ–ಪಾಕಿಸ್ತಾನ ಕದನ ವಿರಾಮಕ್ಕೆ ನಾನೇ ಸಂಧಾನ ಮಾಡಿಸಿದ್ದೇನೆ” ಎಂದು ಘೋಷಿಸಿದ್ದರಿಂದ ಆ ಸಮಯದಲ್ಲಿ ದೇಶ-ವಿದೇಶಗಳಲ್ಲಿ ಬಿಸಿ ಚರ್ಚೆ ಏಳಿತ್ತು.
ಆದರೆ ಇದೀಗ ಪಾಕಿಸ್ತಾನದ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವ ಆಗಿರುವ ಇಶಾಕ್ ದಾರ್ ದೊಡ್ಡ ಒಪ್ಪಿಗೆಯನ್ನು ನೀಡಿದ್ದಾರೆ. “ಕದನ ವಿರಾಮದ ಪ್ರಸ್ತಾಪ ಅಮೆರಿಕದ ಮೂಲಕ ಬಂದರೂ, ಭಾರತ ಅದನ್ನು ನಿರಾಕರಿಸಿತು” ಎಂದು ಅವರು ಹೇಳಿದ್ದಾರೆ. ಅಂದರೆ ಅಮೆರಿಕಾದ ಮಧ್ಯಸ್ಥಿಕೆ ನಡೆದಿಲ್ಲ ಎಂಬುದನ್ನು ಪಾಕಿಸ್ತಾನವೇ ಬಹಿರಂಗವಾಗಿ ಒಪ್ಪಿಕೊಂಡಂತಾಗಿದೆ. ಇದರಿಂದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ದೊಡ್ಡ ಮುಖಭಂಗವಾಗಿದೆ.
ಈ ಹಿಂದೆ ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿ, “ಅಮೆರಿಕದ ಹೇಳಿಕೆಯ ಪ್ರಕಾರವೇ ಪಾಕಿಸ್ತಾನ ವಿರುದ್ಧ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದಾರೆ” ಎಂದು ಸಂಸತ್ತಿನಲ್ಲಿ ಗಲಾಟೆ ಎಬ್ಬಿಸಿದ್ದವು. ವಿರೋಧ ಪಕ್ಷದ ಕೆಲವರು ಮೋದಿಯನ್ನು “ಸರೆಂಡರ್ ಮೋದಿ” ಎಂದೂ ವ್ಯಂಗ್ಯವಾಡಿದ್ದರು. ಆದರೆ ಪ್ರಧಾನಿ ಮೋದಿ ಸ್ಪಷ್ಟವಾಗಿ ಪ್ರತಿಕ್ರಿಯಿಸಿ, “ಭಾರತ–ಪಾಕಿಸ್ತಾನ ಕದನ ವಿರಾಮಕ್ಕೆ ಯಾವುದೇ ಮೂರನೇ ದೇಶದ ಮಧ್ಯಸ್ಥಿಕೆ ನಡೆದಿಲ್ಲ. ಭಾರತ ತನ್ನ ಆಂತರಿಕ ಸಮಸ್ಯೆಗಳಿಗೆ ಎಂದಿಗೂ ಹೊರದೇಶದ ಹಸ್ತಕ್ಷೇಪಕ್ಕೆ ಅವಕಾಶ ನೀಡುವುದಿಲ್ಲ” ಎಂದು ಹೇಳಿದ್ದಾರೆ.
ಕಾಶ್ಮೀರ ವಿಚಾರದಲ್ಲಿಯೂ ಸಹ ಭಾರತ ಯಾವಾಗಲೂ ಮೂರನೇ ವ್ಯಕ್ತಿಯ ಹಸ್ತಕ್ಷೇಪವನ್ನು ತಿರಸ್ಕರಿಸಿದೆ. ಇದೀಗ ಪಾಕಿಸ್ತಾನದ ವಿದೇಶಾಂಗ ಸಚಿವರ ಒಪ್ಪಿಗೆಯು, ಮೋದಿ ಸರ್ಕಾರದ ನಿಲುವಿಗೆ ಮತ್ತಷ್ಟು ಬಲ ತುಂಬಿದಂತಾಗಿದೆ.