ಗುಜರಾತ್: ಮಾಜಿ ಕ್ರಿಕೆಟಿಗ ಮತ್ತು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸಂಸದ ಯೂಸುಫ್ ಪಠಾಣ್ ಅವರು ಭೂಮಿಯೊಂದನ್ನು ಅತಿಕ್ರಮಣ ಮಾಡಿದ್ದು, ಆ ಜಾಗವನ್ನು ತಕ್ಷಣವೇ ಖಾಲಿ ಮಾಡಬೇಕೆಂದು ಗುಜರಾತ್ ಹೈಕೋರ್ಟ್ ಆದೇಶ ನೀಡಿದೆ.
ಕುತೂಹಲಕರ ಸಂಗತಿಯೇನೆಂದರೆ, "ನಾನು ಕಾನೂನುಬದ್ಧವಾಗಿ ಭೂಮಿಯನ್ನು ಆಕ್ರಮಿಸಿಕೊಂಡಿದ್ದೇನೆ ಮತ್ತು ಇಂದಿನ ಮಾರುಕಟ್ಟೆ ಬೆಲೆಯನ್ನು ಪಾವತಿಸಲು ಸಿದ್ಧನಿದ್ದೇನೆ. ನನ್ನ ಕುಟುಂಬದ ಸುರಕ್ಷತೆಗಾಗಿ, ನನ್ನ ಬಂಗಲೆಯ ಪಕ್ಕದಲ್ಲಿರುವ ಈ ಭೂಮಿಯನ್ನು ನನಗೆ ಮಂಜೂರು ಮಾಡಬೇಕು" ಎಂದು ಪಠಾಣ್ ನ್ಯಾಯಾಲಯದ ಮುಂದೆ ಬೇಡಿಕೊಂಡಿದ್ದರು.
ಅದಕ್ಕೆ ಪ್ರತಿಯಾಗಿ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಮೌನ ಭಟ್ ಅವರು, "ನೀವು ಅತಿಕ್ರಮಣಕಾರರು. ಹಣ ಪಾವತಿಸಿ ಅಕ್ರಮ ಆಸ್ತಿಯನ್ನು ಕಾನೂನುಬದ್ಧಗೊಳಿಸಲು ಸಾಧ್ಯವಿಲ್ಲ" ಎಂದು ಖಡಕ್ ಉತ್ತರ ನೀಡಿದ್ದಾರೆ.
"ಖ್ಯಾತಿ ಅಥವಾ ಸಾರ್ವಜನಿಕ ಸ್ಥಾನವು ವಿನಾಯಿತಿ ನೀಡುವುದಿಲ್ಲ. ವಡೋದರಾ ಮುನ್ಸಿಪಲ್ ಕಾರ್ಪೊರೇಷನ್ ಅತಿಕ್ರಮಣವನ್ನು ತೆರವುಗೊಳಿಸಬೇಕು" ಎಂದು ಆದೇಶ ಹೊರಡಿಸಿದ್ದಾರೆ.
2012 ರಲ್ಲೇ ವಡೋದರಾ ಮುನ್ಸಿಪಲ್ ಕಾರ್ಪೊರೇಷನ್ ಗೆ ಸೇರಿದ ಸರ್ಕಾರಿ ಭೂಮಿಯನ್ನು ಯೂಸುಫ್ ಪಠಾಣ್ ಆಕ್ರಮಿಸಿಕೊಂಡಿದ್ದರು. ಆ ಸ್ಥಳವನ್ನು ಖಾಲಿ ಮಾಡುವಂತೆ ನೀಡಿದ್ದ ನೋಟಿಸ್ ಹಿನ್ನೆಲೆ ವಿವಾದ ಹುಟ್ಟಿಕೊಂಡಿತ್ತು. ಆ ನೋಟಿಸ್ ಅನ್ನು ಪ್ರಶ್ನಿಸಿ ಪಠಾಣ್ ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದರು.
ವಡೋದರಾದ ತಂಡಲ್ಜಾ ಪ್ರದೇಶದಲ್ಲಿರುವ ತಮ್ಮ ಬಂಗಲೆಯ ಪಕ್ಕದ ಭೂಮಿಯ ನಿಯಂತ್ರಣವನ್ನು ಉಳಿಸಿಕೊಳ್ಳಲು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ, "ಜನಸಾಮಾನ್ಯರಿಗೆ ಅನ್ವಯವಾಗುವ ಕಾನೂನು ಸೆಲೆಬ್ರಿಟಿಗಳಿಗೆ ಸಹ ಸಮಾನವಾಗಿ ಅನ್ವಯಿಸುತ್ತದೆ" ಎಂಬುದನ್ನು ಎತ್ತಿ ತೋರಿಸಿದರು.