ಬೆಂಗಳೂರು: ಅಪ್ರಾಪ್ತ ಬಾಲಕಿ, ಯುವತಿಯರು ಸೇರಿದಂತೆ ಒಟ್ಟು ಎಂಟು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ನಡೆಸಿದ ಆರೋಪದ ಮೇರೆಗೆ ಯೋಗಗುರು ನಿರಂಜನ ಮೂರ್ತಿಯನ್ನು ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ನಿರಂಜನ ಮೂರ್ತಿ ರಾಜರಾಜೇಶ್ವರಿ ನಗರದಲ್ಲಿ ಯೋಗ ಕೇಂದ್ರವೊಂದನ್ನು ನಡೆಸುತ್ತಿದ್ದ. ಅಲ್ಲಿ ತರಬೇತಿ ಪಡೆಯುತ್ತಿದ್ದ ಹದಿನೇಳು ವರ್ಷದ ಬಾಲಕಿಗೆ “ನಿನ್ನನ್ನು ಯೋಗದಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಕರೆದೊಯ್ಯುತ್ತೇನೆ, ಸರ್ಕಾರಿ ಕೆಲಸವೂ ಸಿಗಬಹುದು” ಎಂದು ನಂಬಿಸಿ ದೌರ್ಜನ್ಯ ಎಸಗಿದ ಎಂದು ದೂರಿನಲ್ಲಿ ಹೇಳಲಾಗಿದೆ.
ಅಪ್ರಾಪ್ತೆಯ ದೂರಿನ ಆಧಾರದ ಮೇಲೆ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾದ ನಂತರ ಆರೋಪಿ ತಲೆಮರೆಸಿಕೊಂಡಿದ್ದ. ಇದೀಗ ಪೊಲೀಸರು ಅವನನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.
ಈ ಯೋಗ ಕೇಂದ್ರಕ್ಕೆ ಹಾಜರಾಗಿದ್ದ ಇತರ ಯುವತಿಯರೂ ದೌರ್ಜನ್ಯಕ್ಕೊಳಗಾಗಿರುವ ಶಂಕೆಯ ಹಿನ್ನೆಲೆ, ದೂರು ನೀಡಲು ಮುಂದೆ ಬರಬೇಕೆಂದು ರಾಜರಾಜೇಶ್ವರಿ ನಗರ ಪೊಲೀಸರು ಕೋರಿದ್ದಾರೆ. ದೂರುದಾರರ ವಿವರಗಳನ್ನು ಸಂಪೂರ್ಣ ಗೌಪ್ಯವಾಗಿಡುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.