27 July 2025 | Join group

ಹೋಳಿ ಸಂದರ್ಭದಲ್ಲಿ ದಿನಗೂಲಿ ಕಾರ್ಮಿಕರ ಮೇಲೆ ದಾಳಿ : ಉಪ್ಪಿನಂಗಡಿಯಿಂದ ಜಾಗ ಖಾಲಿ ಮಾಡಿದ ಮುಗ್ಧ ಕಾರ್ಮಿಕರು

  • 21 Mar 2025 07:08:06 PM

ಉಪ್ಪಿನಂಗಡಿ : ಉಪ್ಪಿನಂಗಡಿಯ ನೆಕ್ಕಿಲಾಡಿಯಲ್ಲಿ ಬಿಹಾರ ಮೂಲದ ಕಾರ್ಮಿಕರು ಹೋಳಿ ಸಂಭ್ರಮಾಚರಣೆ ಮಾಡುತ್ತಿರುವ ಸಂದರ್ಭದಲ್ಲಿ ಗುಂಪೊಂದು ದಾಳಿ ನಡೆಸಿದ ಘಟನೆ ನಡೆದಿತ್ತು. ದುರದುಷ್ಟಕರವೆಂದರೆ, ಬಿಹಾರದ ಮೂಲದ ಕಾರ್ಮಿಕರು ಈ ಘಟನೆಯ ನಂತರ ನಾಪತ್ತೆಯಾಗಿದ್ದು, ಪರಿಸರದಲ್ಲಿದ್ದ ಬಹುತೇಕ ಉಳಿದ ರಾಜ್ಯಗಳಿಂದ ವಲಸೆ ಬಂದಿರುವ ಕಾರ್ಮಿಕರು ಕೂಡ ನಾಪತ್ತೆಯಾಗಿರುವುದು ಎದ್ದು ಕಾಣುತ್ತಿದೆ.

 

ಮದರಸದಿಂದ ಮನೆಗೆ ತೆರಳುತ್ತಿದ್ದ ಇಬ್ಬರು ಬಾಲಕರಿಗೆ ಬಣ್ಣ ಹಚ್ಚಿದರೆಂಬ ಕಾರಣಕ್ಕೆ ಗುಂಪೊದು ದಾಳಿ ನಡೆಸಿದೆ.  ಕಾರ್ಮಿಕರು ವಾಸ್ತವ್ಯ ಹೊಂದಿದ್ದ ವಸತಿಗೆ ದಾಳಿ ಮಾಡಿ ಕಾರ್ಮಿಕರಿಗೆ ಯದ್ವಾತಧ್ವ ಹಲ್ಲೆ ನಡೆಸಿರುತ್ತಾರೆ. ಕಾರ್ಮಿಕರು ಹಬ್ಬದ ಸಂದರ್ಭದಲ್ಲಿ ಹಬ್ಬದೂಟಕ್ಕೆಂದು ತಯಾರಿಸಿದ್ದ ಭಕ್ಷಗಳೆಲ್ಲ ಚೆಲ್ಲಾಪಿಲ್ಲಿಯಾಗಿಸಿ, ಕಾರ್ಮಿಕರು ಹಬ್ಬದೂಟವನ್ನು ಕೂಡ ಸವಿಯದ ರೀತಿಯಲ್ಲಿ ಗುಂಪು ದಾಳಿ ಮಾಡಿದೆ ಎಂದು ಆಪಾದಿಸಲಾಗಿದೆ. 

 

ಈ ಘಟನೆಯ ನಂತರ ಹೆದರಿದ ಬಿಹಾರ ಮೂಲದ ಕಾರ್ಮಿಕರು ನಾಪತ್ತೆಯಾಗಿ, ಎಲ್ಲಿಗೆ ಹೋಗಿದ್ದಾರೆಂದು ತಿಳಿದು ಬಂದಿಲ್ಲ. ಹಲ್ಲೆಕೋರರು ಉತ್ತರ ಭಾರತದ ಉಳಿದ ಕಾರ್ಮಿಕರಿಗೂ ದಾಳಿ ಮಾಡುವ ಭೀತಿಯಿಂದಾಗಿ ಅವರು ಕೂಡ ಸ್ಥಳ ಖಾಲಿ ಮಾಡಿದ್ದಾರೆಂದು ತಿಳಿದುಬಂದಿದೆ. ಈ ಕಾರ್ಮಿಕರನ್ನು ಅವಲಂಬಿಸಿದ್ದ ಉಪ್ಪಿನಂಗಡಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಉದ್ಯಮಗಳು ಸ್ವಲ್ಪ ಮಟ್ಟಿಗೆ ಸ್ಥಗಿತಗೊಂಡಿದೆ ಎಂದು ತಿಳಿದು ಬಂದಿದೆ.

 

ಬೆಳಗಿನ ಜಾವ ಉಪ್ಪಿನಂಗಡಿಯಿಂದ ಪುತ್ತೂರು, ಕಡಬ, ಸುಳ್ಯ, ಬೆಳ್ತಂಗಡಿ ಮತ್ತು ಇನ್ನಿತರ ಪ್ರದೇಶಗಳಿಗೆ ಹೋಗುವ ಕಾರ್ಮಿಕರು ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಹಿಂಡು ಹಿಂಡಾಗಿ ಕೆಲಸ ಕಾರ್ಯಗಳಿಗೆ ಹೋಗುವುದನ್ನು ಕಾಣುತ್ತಿದ್ದೆವು. ಸಂಜೆಯಾಗುತ್ತಿದ್ದಂತೆ, ಈ ಎಲ್ಲಾ ಕಾರ್ಮಿಕರು ಮರಳಿ ಉಪ್ಪಿನಂಗಡಿ ಪೇಟೆಗೆ ಬಂದು ಅಂಗಡಿ ಮುಗ್ಗಟ್ಟುಗಳಿಗೆ ತೆರಳಿ ದಿನನಿತ್ಯದ ವಸ್ತುಗಳನ್ನು ಖರೀದಿಸಲು ಪೇಟೆ ಸುತ್ತಾಡುತಿದ್ದರು.

 

ಇವಾಗ ಉಪ್ಪಿನಂಗಡಿ ಪೇಟೆ, ಬೆಳಿಗ್ಗೆ ಮತ್ತು ಸಂಜೆಯ ಹೊತ್ತು ಮೊದಲಿಗಿಂತ ಕಡಿಮೆ ಜನರಿಂದ ಬಿಕೋ ಅನಿಸುತ್ತಿದ್ದು ಅಂಗಡಿ ಮುಗ್ಗಟ್ಟುಗಳಿಗೆ ವ್ಯಾಪಾರ ಕಡಿಮೆಯಾಗಿದೆಯಂತೆ. ಕಾಂಕ್ರಿಟ್, ತೋಟದ ಕೆಲಸ ಮತ್ತು ಇನ್ನಿತರ ಕೆಲಸಗಳಿಗೆ ಜನ ಸಿಗದೆ ಜನರು ಪರದಾಡುವಂತಾಗಿದೆ.  ದೈನಂದಿನ ಸಾರಿಗೆಗೂ ಬಿಸಿ ತಟ್ಟಿದ್ದು, ದಾಳಿ ನಡೆಸಿದ ಗುಂಪುಗಳ ಈ ರೀತಿಯ ದಿನಗೂಲಿ ಕಾರ್ಮಿಕರಿಗೆ ಹೊಡೆದ ಬಗ್ಗೆ ಸಾರ್ವಜನಿಕರು ಕೋಪ ವ್ಯಕ್ತ ಪಡಿಸುತ್ತಿದ್ದಾರೆ.