16 September 2025 | Join group

ಕರ್ನಾಟಕದಲ್ಲೀಗ ಬೆಲೆ ಏರಿಕೆಯ ಬಂಪರ್ ಲಾಟರಿ! ಒಂದರ ಮೇಲೊಂದು ಹೊಡೆತ! ಹಾಲು, ಮೊಸರು... ಇಗೋ ಇದೀಗ ವಿದ್ಯುತ್?

  • 27 Mar 2025 07:53:38 PM

ಬೆಂಗಳೂರು/ಮಂಗಳೂರು : ಈಗಾಗಲೇ ಕರ್ನಾಟಕದ ಜನತೆ ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದು, ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕರ್ನಾಟಕದ ಜನತೆ ಬಹಳಷ್ಟು ಬೆಲೆ ಏರಿಕೆಯನ್ನು ಈಗಾಗಲೇ ನೋಡಿಯಾಗಿದೆ. ಈ ರೀತಿ ಬೆಲೆ ಏರಿಕೆಯಾದರೆ ಜೀವನ ನಡೆಸಲು ತುಂಬಾ ಕಷ್ಟ ಎಂದು ಗೋಳಿಡುತ್ತಿದ್ದಾರೆ ರಾಜ್ಯದ ಜನತೆ.

 

ಇವತ್ತು ( ಮಾರ್ಚ್ 27 ) ಅಂಗೀಕಾರವಾದ ಬೆಲೆ ಏರಿಕೆಗಳು

ಈಗಾಗಲೇ ಹಾಲು ಮತ್ತು ಮೊಸರಿನ ದರ ಏರಿಕೆಗೆ ಗ್ರೀನ್ ಸಿಗ್ನಲ್ ಸಿಕ್ಕಿಯಾಗಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ( ಮಾರ್ಚ್ 27) ನಡೆದ ಸಚಿವ ಸಂಪುಟದಲ್ಲಿ ನಂದಿನಿ ಹಾಲು ಮತ್ತು ಮೊಸರಿಗೆ ಪ್ರತಿ ಲೀಟರಿಗೆ ರೂ. 4 ರಷ್ಟು ಹೆಚ್ಚಿಸಲು ಸಮ್ಮತಿ ನೀಡಲಾಗಿದೆ.

 

ಇದರ ಬೆನ್ನಲ್ಲೇ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (ಕೆಇಆರ್‌ಸಿ) ಮತ್ತೊಂದು ವಿದ್ಯುತ್ ಶಾಕ್ ರಾಜ್ಯದ ಜನತೆಗೆ ನೀಡಿದೆ. ಹೌದು, ನೀವು ಸರಿಯಾಗಿ ಕೇಳಿಸಿಕೊಂಡಿದ್ದೀರಿ, ಏಪ್ರಿಲ್ 1 ರಿಂದ ಪ್ರತಿ ಯೂನಿಟ್ ಗೆ 36 ಪೈಸೆ ಹೆಚ್ಚಳ ಮಾಡಲಿದ್ದೇವೆ ಎಂದು ಕೆಇಆರ್‌ಸಿ ಅಧಿಕೃತವಾಗಿ ಘೋಷಣೆ ಮಾಡಿದೆ ಮತ್ತು ಈ ದರ ಮುಂದಿನ ಮೂರೂ ವರ್ಷಗಳ ವರೆಗೆ ಇರಲಿದೆ ಅಂದು ಪ್ರಕಟಿಸಿದೆ.

 

ಇತ್ತೀಚೆಗಷ್ಟೇ ಬೆಲೆ ಏರಿಕೆಯಾದ ಶಾಕ್ ಗಳು

ಕೆ ಎಸ್ ಆರ್ ಟಿ ಸಿ ಬಸ್ ದರ ಏರಿಕೆ ಜಾಸ್ತಿಯಾಗಿ ಕೆಲವೇ ದಿನಗಳಲ್ಲಿ ಬೆಂಗಳೂರಿನ ಜನತೆಗೆ ನಮ್ಮ ಮೆಟ್ರೋ ಬೆಲೆ ಏರಿಕೆ ಮಾಡಿ ಸರಕಾರ ಶಾಕ್ ನೀಡಿತ್ತು. ಆಮೇಲೆ ಮದ್ಯಪ್ರಿಯರ ಸರದಿ ಬಂತು, ಮದ್ಯದ ಬೆಲೆ ಏರಿಕೆಯಾಯಿತು. ಇಂದು ಹಾಲು ಮತ್ತು ಮೊಸರಿನ ಬೆಲೆ ಏರಿಕೆ ಮತ್ತು ಏಪ್ರಿಲ್ 1 ರಿಂದ ವಿದ್ಯುತ್ ಬೆಲೆ ಏರಿಕೆ ಬರಲಿದೆ.

 

ಈ ಎಲ್ಲಾ ಬೆಲೆ ಏರಿಕೆಯನ್ನು ನೋಡಿ ರಾಜ್ಯದ ಜನತೆ ಅಯ್ಯಯೋ ಅಂತ ಬೊಬ್ಬೆ ಹೊಡೆಯುತ್ತಿದ್ದರೆ. ಪರಿಸ್ಥಿತಿಗೆ ಅನುಗುಣವಾಗಿ ಬೆಲೆ ಏರಿಕೆ ಮಾಡುವುದು ಸರ್ವೇ ಸಾಮಾನ್ಯ ಆದರೆ ಒಂದೇ ಸವನೆ ಈ ರೀತಿಯ ಬೆಲೆ ಏರಿಕೆಯ ಬಿಸಿ ರಾಜ್ಯದ ಜನತೆಗೆ ದೊಡ್ಡ ಹೊರೆಯಾಗಿ ಮಾರ್ಪಡಲಿದೆ ಎಂದು ರಾಜ್ಯದ ಸಭ್ಯ ನಾಗರಿಕರು ಅಭಿಪ್ರಾಯ ಪಟ್ಟಿದ್ದಾರೆ.