27 July 2025 | Join group

ಯತ್ನಾಳ್ ನ ಹೊಸ ರಾಜಕೀಯ ಹೆಜ್ಜೆ – ಪ್ರಾದೇಶಿಕ ಪಕ್ಷ ಹುಟ್ಟೋದು ಸತ್ಯವೇ?

  • 28 Mar 2025 05:44:00 PM

ಪ್ರೀತಿಯ ಓದುಗರೇ, ಕರ್ನಾಟಕದ ರಾಜಕೀಯದಲ್ಲಿ ಒಂದಲ್ಲ ಒಂದು ರೀತಿಯ ಬೆಳವಣಿಗೆಗಳು ನಡೆಯುತ್ತಲೇ ಇರುತ್ತದೆ. ಒಂದು ಕಡೆ ಆಡಳಿತ ಪಕ್ಷವಾದ ಕಾಂಗ್ರೆಸ್ ನಲ್ಲಿ ಕೆಲ ಬೆಳವಣಿಗೆಯಾದರೆ, ಇನ್ನೊಂದು ಕಡೆ ವಿರೋಧ ಪಕ್ಷವಾದ ಬಿಜೆಪಿಯಲ್ಲಿ ಮತ್ತೊಂದು ರೀತಿಯ ಬೆಳವಣಿಗೆ. ಒಂದು ರೀತಿಯ ಸ್ಪರ್ಧೆಗೆ ಬಿದ್ದಂತೆ ರಾಜ್ಯದ ಎರಡು ಮುಖ್ಯ ಪಕ್ಷಗಳಲ್ಲಿ ಮಹತ್ತರ ಬೆಳವಣಿಗೆಗಳು ನಡೆಯುತ್ತಿವೆ.

 

ಹನಿಟ್ರಾಪ್ ಪ್ರಕರಣ ಸದನದ ಒಳಗೆ ಮತ್ತು ಹೊರಗೆ ಸದ್ದು ಮಾಡುತ್ತಿದ್ದಂತೆ, ಈ ನಡುವೆ ಬಿಜೆಪಿಯ ಬಸವನಗೌಡ ಪಾಟೀಲ್ ಯತ್ನಾಳ್ ರವರನ್ನು ಉಚ್ಚಾಟನೆ ಮಾಡಿದ್ದು ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. ಮೂರನೇ ನೋಟೀಸ್ ನಂತರ ಯತ್ನಾಳ್ ರವರ ಉತ್ತರಕ್ಕೆ ಸಮಾಧಾನಗೊಳ್ಳದ ಬಿಜೆಪಿ ಹೈಕಮಾಂಡ್ ಉಚ್ಚಾಟನೆಯ ಯಂತ್ರವನ್ನು ಉಪಯೋಗಿಸಿ, 6 ವರ್ಷಗಳ ಕಾಲ ಯತ್ನಾಳ್ ರವರನ್ನು ಪಕ್ಷದಿಂದ ಹೊರಕ್ಕೆ ಇಟ್ಟಿದೆ.

 

ಯತ್ನಾಳ್ ರವರ ಉಚ್ಚಾಟನೆ ಯಾಕಾಯ್ತು ?

ಯತ್ನಾಳ್ ರವನ್ನು ಉಚ್ಚಾಟನೆ ಮಾಡುವ ಮೂಲಕ ಇನ್ನು ಮುಂದೆ ಸಹಿಸಲ್ಲ, ಕೈ ಕಟ್ಟಿ ಕೂರಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ಬಿಜೆಪಿ ಹೈ ಕಮಾಂಡ್ ರವಾನೆ ಮಾಡಿದೆ. ಫೆ. 10 ಕ್ಕೆ ಯತ್ನಾಳ್ ರವರಿಗೆ ಶೋಕಾಸ್ ನೋಟೀಸ್ ನೀಡಲಾಗಿತ್ತು. ಆವಾಗಲೇ ನೋಟೀಸ್ ಕೊಟ್ಟು ಉಚ್ಚಾಟನೆ ಮಾಡುವ ಉದ್ದೇಶ ಬಿಜೆಪಿ ಹೈ ಕಮಾಂಡ್ ಹೊಂದಿತ್ತು, ಆದರೆ ತಟಸ್ಥ ಬಣ ದಿಲ್ಲಿಗೆ ಹೋಗಿ, ಮನವಿ ಮಾಡಿದರ ಫಲವಾಗಿ ಉಚ್ಚಾಟನೆಯನ್ನು ಕೈ ಬಿಟ್ಟಿತ್ತು . ಅದೇ ಸಂದರ್ಭದಲ್ಲಿ ರಾಮುಲು, ಡಾ. ಸುಧಾಕರ್ ರವರು ಪಕ್ಷದ ಬಗ್ಗೆ ಮಾತನಾಡಿದ್ದು, ಈ ಎಲ್ಲಾ ವಿಷಯಗಳು ಏಕ ಕಾಲಕ್ಕೆ ಬಂದ ಕಾರಣ ಹೈ ಕಮಾಂಡ್ ಸ್ವಲ್ಪ ತಟಸ್ಥವಾಯಿತು. ಯತ್ನಾಳ್ ಗೆ ತಟಸ್ಥ ಬಣ ಬೆಂಬಲ ಕೊಟ್ಟಿತ್ತು. ಆದರೆ, ನೋಟೀಸ್ ಜಾರಿಯಾದ ನಂತರವೂ ಬಿಡದೆ ಪದೇ ಪದೇ ಮಾಧ್ಯಮದ ಮುಂದೆ ಯತ್ನಾಳ್ ರವರು ಯಡಿಯೂರಪ್ಪ ಮತ್ತು ವಿಜೇಯೇಂದ್ರ ವಿರುದ್ಧ ಮಾತನಾಡುವುದನ್ನು ನಿಲ್ಲಿಸದೆ, ಏಕವಚನದ ಪ್ರಯೋಗವು ಮಾಡುತಿದ್ದ ವಿಚಾರ ಮತ್ತು ಹೈ ಕಮಾಂಡ್ ವಿರುದ್ಧ ಹೇಳಿಕೆ ಎಲ್ಲರಿಗೆ ತಿಳಿದ ವಿಷಯ.

 

ಯತ್ನಾಳ್ ರವರನ್ನು ಉಳಿಸಲು ಬಿಜೆಪಿ ಪ್ರಯತ್ನ ಮಾಡಿತ್ತೇ ?

ಮಾಹಿತಿ ಪ್ರಕಾರ, ಹಿಂದೊಮ್ಮೆ ಅಮಿತ್ ಶಾ ಪಕ್ಷದ ಹಿರಿಯ ನಾಯಕರುಗಳನ್ನು ಕರೆಸಿ, ಯತ್ನಾಳ್ ರವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಬೇಕಾಗಿ ಯೋಚಿಸ್ತಾ ಇದ್ದೀವಿ, ಅವರಿಗೆ ಒಂದೆರಡು ತಿಂಗಳು ಸ್ವಲ್ಪ ಮಾತನಾಡದೆ ಇರಲು ಹೇಳಿ ಎಂದು ತಿಳಿಸಿದ್ದಾರಂತೆ. ಆದರೆ ಯತ್ನಾಳ್ ಹದಿನೈದು ದಿನದ ಒಳಗೆ ಮತ್ತೆ ಯಡಿಯೂರಪ್ಪರನ್ನು ಟೀಕೆ ಮಾಡಿದ್ದರು. ಪದೇ ಪದೇ ಅಶಿಸ್ತಿನ ಮಾತು, ವೈಯಕ್ತಿಕ ನಿಂದನೆ ಮಾಡುತ್ತ ಹೋದರೆ, ನಿಮ್ಮ ಮೇಲೆ ಎಷ್ಟೇ ಅನುಕಂಪವಿದ್ದರೂ ಬಚಾವ್ ಮಾಡಲು ಅಸಾಧ್ಯ ಎಂಬುವುದು ಸತ್ಯಸಂಗತಿ ಅಲ್ಲವೇ.

 

ಯತ್ನಾಳ್ ಪಕ್ಷ ಕೈ ಬಿಟ್ಟರೆ ಬೇರೆ ಪಕ್ಷ ಕಟ್ಟುವ ವಿಚಾರ ಪ್ರಸ್ತಾಪಿಸಿದ್ದಾರೆಯೇ ?

ಹೌದು ಎನ್ನುತ್ತದೆ ಕೆಲವು ಮಾಧ್ಯಮ ವರದಿಗಳು.  ನನ್ನನ್ನು ಉಚ್ಚಾಟನೆ ಮಾಡಿದರೆ, ಪ್ರಾದೇಶಿಕ ಪಕ್ಷ ಕಟ್ಟುವ ಮಾತನ್ನು ಸಂಘದ ಕೆಲ ಹಿರಿಯರಿಗೆ ಮೊದಲೇ ತಿಳಿಸಿದ್ದಾರಂತೆ. ಹಿಂದುತ್ವದ ಆದರದ ಮೇಲೆ ಒಂದು ಪಕ್ಷ ಕಟ್ಟುತೇನೆ, 60 ಕ್ಷೇತ್ರಗಳಿಗೆ ಅಭ್ಯರ್ಥಿ ಹಾಕುತ್ತೇನೆ ಎಂದು ಸಂಘದ ವರಿಷ್ಠರ ಮುಂದೆನೇ ಹೇಳಿದ್ದಾರಂತೆ. ಬಿಜೆಪಿಯ ಯತ್ನಾಳ್ ರವರ ಉಚ್ಚಾಟನೆ ಯಾವಾಗಲೋ ಆಗಬೇಕಿತ್ತು ಆದರೆ ಯಾವಾಗ ನಾನು ಹೊಸ ಪಕ್ಷ ಕಟ್ಟುತೇನೆ ಎಂದು ಯತ್ನಾಳ್ ಹೇಳಿದರೋ ಈ ಪ್ಲಾನ್ ಗೆ ಬ್ರೇಕ್ ಹಾಕಲಾಯಿತಂತೆ.

 

ಯತ್ನಾಳ್ ಉಚ್ಚಾಟನೆ ಮಾಡುವ ಹಿಂದೆ ಬಿಜೆಪಿಯ ಲೆಕ್ಕಾಚಾರ

ಮುಂಬಯಿ ಕರ್ನಾಟಕದಲ್ಲಿ ಪಂಚಮಶಾಲಿ ಸಮುದಾಯದ ಪಾಲಿಟಿಕ್ಸ್ ಮಾತ್ರ ಮಾಡಬೇಕು, ಜೆಡಿಎಸ್ ಗೆ ಹೋಗಿ ಆ ಭಾಗದಲ್ಲಿ ಸ್ಪರ್ಧೆ ಮಾಡಬುಹುದೆಂದರೆ ಆ ಭಾಗದಲ್ಲಿ ಜೆಡಿಎಸ್ ನ ಅಸ್ತಿತ್ವನೇ ಇಲ್ಲ. ಕಾಂಗ್ರೆಸ್ ನ ಡಿಕೆಸಿ ಜೊತೆ ಈಗಾಗಲೇ ತೊಡೆ ಕಟ್ಟಿ ನಿಂತಾಗಿದೆ ಈ ಎಲ್ಲಾ ವಿಚಾರಗಳನ್ನು ಗಣನೆಗೆ ತೆಗೆದುಕೊಂಡು ಬಿಜೆಪಿ ಬಿಟ್ಟರೆ ಬೇರೆ ಆಯ್ಕೆ ಯತ್ನಾಳ್ ರವರಿಗೆ ಇಲ್ಲ ಎನ್ನುವುದನ್ನು ದೃಢಕರಿಸಿದ ಮೇಲೆಯೇ ಈ ರೀತಿಯ ನಿರ್ಧಾರಕ್ಕೆ ಬಂದಿರಬಹುದು ಎಂದು ಮೂಲಗಳು ವರದಿ ಮಾಡಿದೆ.

 

ಪ್ರಾದೇಶಿಕ ಪಕ್ಷ ಕಟ್ಟುತ್ತಾರೆಯೇ ಯತ್ನಾಳ್ ?

ಮುಂಬಯಿ ಕರ್ನಾಟಕ ಕಡೆಯಲ್ಲಿ ಯತ್ನಾಳ್ ರವರ ಪ್ರಭಾವ ಇದ್ದೇ ಇದೆ, ಆದರೆ ಇಡೀ ರಾಜ್ಯಕ್ಕೆ ಯತ್ನಾಳ್ ರವರ ಯಾವ ಪ್ರಭಾವ ಇದೆ ಎಂಬುವುದನ್ನು ಈಗ ಹೇಳಲು ತುಂಬಾ ಕಷ್ಟ ಯಾಕೆಂದರೆ ಬರೀ ಹಿಂದುತ್ವ ಮಾತ್ರ ಹಿಡಿದುಕೊಂಡು ಕರ್ನಾಟಕದಲ್ಲಿ ರಾಜಕೀಯ ಮಾಡಲು ಕಷ್ಟ. ಕಳೆದ 25 ವರ್ಷದ ಯತ್ನಾಳ್ ರಾಜಕೀಯ ನೋಡಿದರೆ ಹೆಚ್ಚು ಭಾಷಣಗಳೇ ಹೊರತು, ಗ್ರೌಂಡ್ ವರ್ಕ್ ಕಡಿಮೆ. ಯಡಿಯೂರಪ್ಪ ಅಥವಾ ದಿವಂಗತ ಅನಂತ್ ಕುಮಾರ್ ರವರು ಪ್ರತಿ ಜಿಲ್ಲೆಗೆ ತೆರಳಿ ಅಭ್ಯರ್ಥಿಗೆ ಸೀಟು ಕೊಡಿಸುವಷ್ಟು ಪ್ರಭಾವ ಹೊಂದಿದವರಾಗಿದ್ದರು. ರಾಜ್ಯವಿಡೀ ಸುತ್ತಿದಂತ ಅನುಭವವಿತ್ತು ಆದರೂ ತಮ್ಮದೇ ಸ್ವಂತ ಪಕ್ಷ ಕಟ್ಟಿದ್ದ ಯಡಿಯೂರಪ್ಪನವರು ಯಶಸ್ವೀ ಆಗಿರಲಿಲ್ಲ. ಆದ್ದರಿಂದ ಯತ್ನಾಳ್ ರವರಿಗೆ ಹೊಸ ಪಕ್ಷ ಕಟ್ಟಿ ಬೆಳೆಸಲು ತುಂಬಾ ಕಷ್ಟವಾದ ವಿಷಯ. ಕಾಲವೇ ಉತ್ತರ ನೀಡಬೇಕಾಗಿದೆ ಯತ್ನಾಳ್ ಭವಿಷ್ಯದ ಬಗ್ಗೆ.