ಮಂಗಳೂರು - ಬೆಂಗಳೂರು NH-75 ರಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ.ಸಿ ರೋಡ್ ಮತ್ತು ಕಲ್ಲಡ್ಕ ಪೇಟೆಗಳ ಮಧ್ಯದಲ್ಲಿ ಅತಿ ಎತ್ತರದ ಬೆಟ್ಟದಲ್ಲಿ ನೆಲೆಸಿರುವ ಶಿವನ ದೇವಸ್ಥಾನವೇ ಅದು ಪ್ರಸಿದ್ಧ ನರಹರಿ ಪರ್ವತ. ಬಿ ಸಿ ರೋಡಿನಿಂದ ಕೇವಲ 5 ಕಿ.ಮೀ ದೂರದಿಂದ ಮತ್ತು ಕಲ್ಲಡ್ಕ ಪೇಟೆಯಿಂದ ಸುಮಾರು 2 ಕಿ.ಮೀ ದೂರದಲ್ಲಿ ಈ ಶಿವನ ಮಂದಿರ ಸರಿಸುಮಾರು ಸಮುದ್ರಮಟ್ಟದಿಂದ 1000 ಅಡಿ ಎತ್ತರದಲ್ಲಿದೆ. ಚಾರಣ ಪ್ರಿಯರ ಸ್ವರ್ಗ-ಎಂದೇ ಕರೆಯಲ್ಪಡುವ ಕ್ಷೇತ್ರವೇ ನರಹರಿ ಪರ್ವತ.
ಯಾಕೆ ನರಹರಿ ಸದಾಶಿವ ಎಂಬ ಹೆಸರು ಬಂತು ?
ಪುರಾಣ ಕಥೆಯ ಪ್ರಕಾರ ಮಹಾಭಾರತದ ಕುರುಕ್ಷೇತ್ರ ಯುದ್ಧದ ಬಳಿಕ ಪಾಂಡವರು ತಮ್ಮ ಪಾಪ ವಿಮೋಚನೆಗಾಗಿ ದಕ್ಷಿಣದ ಪುಣ್ಯ ಕ್ಷೇತ್ರಗಳಿಗೆ ಯಾತ್ರೆ ಕೈಗೊಳ್ಳುತ್ತಾರೆ. ಅದೇ ಸಂದರ್ಭದಲ್ಲಿ "ಹರಿ" ಮತ್ತು "ನರ" ಆ ಬೆಟ್ಟವನ್ನೇರುತ್ತಾರೆ. ಅಲ್ಲಿಗೆ ಭೇಟಿ ಕೊಟ್ಟ ಕುರುಹಿಗಾಗಿ ತನ್ನ ಆಯುಧದಿಂದ ಶಂಖ, ಚಕ್ರ, ಗದಾ ಪದ್ಮ ಎಂಬ ನಾಲ್ಕು ತೀರ್ಥಕೂಪಗಳನ್ನು ಮಾಡುತ್ತಾರೆ. ಅದರಲ್ಲಿಯೇ ಪಾಪಗಳನ್ನು ಕಳೆಯುತ್ತಾರೆ. ಅಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ, ಹರನ ಸಮೇತವಾಗಿ ಪೂಜಿಸುತ್ತಾರೆ. ಇದರಿಂದಾಗಿಯೆ ಇಲ್ಲಿಗೆ ನರಹರಿ ಸದಾಶಿವ ಎಂಬ ಹೆಸರು ಬಂದಿದೆ ಎಂದು ಹೇಳಲಾಗಿದೆ.
ಸುಂದರ ನೋಟದ ನರಹರಿ ಪರ್ವತ
ನರಹರಿ ಪರ್ವತ ಪ್ರಕೃತಿಯ ಸೌಂದರ್ಯದ ನಡುವೆ ಇರುವ ಸದಾಶಿವ ದೇವರ ಸಾನಿಧ್ಯ. ಸೂರ್ಯೋದಯ ಹಾಗೂ ಸೂರ್ಯಾಸ್ತದ ದೃಶ್ಯ ಸೊಬಗನ್ನು ಸವಿಯಲು ಈ ಪರ್ವತ ಏರಿದರೆ ಆಕಾಶ ಮುಟ್ಟಿದ ಅನುಭವಾಗುವುದಂತು ಖಂಡಿತ.
ವೈಶಿಷ್ಟತೆ
ತುಳು ಪರಂಪರೆಯ ಆಷಾಢ (ಆಟಿ) ಅಮವಾಸ್ಯೆ ಮತ್ತು ಸೋಣ (ಶ್ರಾವಣ) ಅಮವಾಸ್ಯೆಯಂದು ಇಲ್ಲಿ ತೀರ್ಥ ಸ್ನಾನ ಮಾಡಲು ಸಾವಿರಾರು ಜನ ಬರುತ್ತಾರೆ. ಮುಂಜಾನೆಯೇ ಅಸಂಖ್ಯಾತ ಭಕ್ತರು ಮುಖ್ಯವಾಗಿ ನವವಧೂವರರು ನರಹರಿ ಪರ್ವತ ಏರಿ ಶಂಖ, ಚಕ್ರ, ಗದಾ, ಪದ್ಮಗಳೆಂಬ ನಾಲ್ಕು ತೀರ್ಥ ಕೂಪದಲ್ಲಿ ಮಿಂದು, ನಾಗರಾಜನಿಗೆ, ವಿನಾಯಕನಿಗೆ, ಸದಾಶಿವನಿಗೆ ಸೇವೆ ಸಲ್ಲಿಸುವುದು ಇಲ್ಲಿನ ವಾಡಿಕೆಯಾಗಿದೆ.
ಈ ಪುಣ್ಯ ಕ್ಷೇತ್ರಕ್ಕೆ ತಲುಪುವ ವಿಧಾನ
ಮಂಗಳೂರು ಕಡೆಯಿಂದ ಬರುವುದಾದರೆ, ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದು ಬಿಸಿ ರೋಡ್ ತಲುಪಬೇಕು, ಅಲ್ಲಿಂದ 5 ಕಿ. ಮೀ ದೂರದಲ್ಲಿ ಬಲಗಡೆ ಭಾಗದಲ್ಲಿ ನರಹರಿ ಪರ್ವತಕ್ಕೆ ತಲುಪಲು ರಸ್ತೆ ಇದೆ.
ಒಂದು ವೇಳೆ ನೀವು ಬೆಂಗಳೂರು ಕಡೆಯಿಂದ ಬರುವುದಾದರೆ, ಕಲ್ಲಡ್ಕ ಜುಂಕ್ಷನ್ ನಿಂದ 2 ಕಿ.ಮೀ ಮಂಗಳೂರು ಕಡೆ ಬಂದರೆ ನಿಮ್ಮ ಬಲ ಬದಿಗೆ ಪರ್ವತ ಏರಲು ರಸ್ತೆ ಇದೆ.
ಶಿವನ ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ಕೊಡಲು ಈ google map ಫಾಲೋ ಮಾಡಬಹುದು.