31 January 2026 | Join group

ತುಳುವೇಶ್ವರ ಕ್ಷೇತ್ರದಲ್ಲಿ ಗುಡಿಯಿಲ್ಲದ ಶಿವ: ಸಾವಿರ ವರ್ಷದ ಇತಿಹಾಸ ಹೊಂದಿದ ಕ್ಷೇತ್ರ

  • 30 Jan 2026 01:42:49 AM

ತುಳುನಾಡಿನ ಅಪರೂಪದ ಶಿವ ಸನ್ನಿಧಾನಗಳಲ್ಲಿ ಒಂದಾದ ತುಳುವೇಶ್ವರ ಕ್ಷೇತ್ರವು ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಬಸ್ರೂರಿನಲ್ಲಿ ಸ್ಥಿತವಾಗಿದೆ. ಈ ಕ್ಷೇತ್ರದ ವಿಶೇಷವೆಂದರೆ ಇಲ್ಲಿ ಶಿವಲಿಂಗಕ್ಕೆ ಪ್ರತ್ಯೇಕ ದೇವಾಲಯವಿಲ್ಲ. ಬದಲಾಗಿ ಆಲದ ಮರವೇ ಆಲಯವಾಗಿ ಶಿವಲಿಂಗವನ್ನು ಮಳೆ, ಬಿಸಿಲಿನಿಂದ ರಕ್ಷಿಸುತ್ತಿದೆ.

 

ಶಿವನು ವೈರಾಗ್ಯಸ್ವರೂಪಿ, ವೈಭವಕ್ಕಿಂತ ಸರಳತೆಯನ್ನು ಮೆಚ್ಚುವವನು ಎಂಬ ನಂಬಿಕೆಗೆ ಈ ಸನ್ನಿಧಾನ ಜೀವಂತ ಸಾಕ್ಷಿಯಾಗಿದೆ. ಸುಮಾರು ಸಾವಿರ ವರ್ಷದ ಇತಿಹಾಸ ಹೊಂದಿರುವ ಈ ಕ್ಷೇತ್ರವು ತುಳುನಾಡಿನ ಭಾಷಿಕ ಪ್ರದೇಶದ ಜನರ ಅಧಿದೇವತೆಯಾಗಿ ಗುರುತಿಸಿಕೊಂಡಿದೆ.

 

ಇತಿಹಾಸದಲ್ಲಿ ಬಸ್ರೂರು ವಾಣಿಜ್ಯ ಕೇಂದ್ರವಾಗಿದ್ದು, ವಿಜಯನಗರ ಕಾಲಕ್ಕೂ ಮುನ್ನವೇ ಪ್ರಮುಖ ಪಟ್ಟಣವಾಗಿತ್ತು. ಈ ಪ್ರದೇಶದಲ್ಲಿ ತುಳುವೇಶ್ವರನ ಮಹಿಮೆ ಪ್ರಸಿದ್ಧಿಯಾಗಿತ್ತು ಎನ್ನುವುದಕ್ಕೆ ಶಾಸನಾಧಾರಗಳೂ ದೊರಕುತ್ತವೆ. ಕ್ರಿ.ಶ. 1401ರಲ್ಲಿ ಕೆತ್ತಿಸಲಾದ ಶಾಸನದಲ್ಲಿ ತುಳುವೇಶ್ವರ ದೇವರಿಗೆ ದಾನ ನೀಡಿದ ಉಲ್ಲೇಖ ಸಿಗುತ್ತದೆ.

 

ಈ ಸ್ಥಳದಲ್ಲಿ ಹಿಂದೆ ದೇವಾಲಯವಿದ್ದುದಕ್ಕೆ ಸಾಕ್ಷಿಯಾಗಿ ನಂದಿ ವಿಗ್ರಹ, ಮಂಟಪದ ಅವಶೇಷಗಳು ಹಾಗೂ ಕಲ್ಲಿನ ಗೋಡೆಗಳ ಕುರುಹುಗಳು ಇಂದಿಗೂ ಕಾಣಿಸುತ್ತವೆ. ದೇವಾಲಯವು ಸುಮಾರು 200 ವರ್ಷಗಳ ಹಿಂದೆ ಶಿಥಿಲಗೊಂಡಿದ್ದು, ಅದೇ ಸಮಯದಲ್ಲಿ ಬೆಳೆದ ಆಲದ ಮರವು ಶಿವಲಿಂಗವನ್ನು ಆವರಿಸಿ ರಕ್ಷಣಾ ಆಲಯದಂತೆ ರೂಪುಗೊಂಡಿದೆ. ಈ ಮರಕ್ಕೆ ಸುಮಾರು 250 ವರ್ಷಗಳ ವಯಸ್ಸಿದೆ ಎಂದು ಅಂದಾಜಿಸಲಾಗಿದೆ.

 

ಇಲ್ಲಿನ ನಂದಿ ವಿಗ್ರಹ ಏಕಶಿಲೆಯಲ್ಲಿ ಕೆತ್ತಲ್ಪಟ್ಟಿದ್ದು ಅತ್ಯಂತ ಅಪರೂಪದ ಶಿಲ್ಪಕಲೆಯ ಮಾದರಿಯಾಗಿದೆ. ಸುಮಾರು 60 ವರ್ಷಗಳ ಹಿಂದೆ ನಿಧಿಯಾಸೆಗಾಗಿ ಈ ವಿಗ್ರಹವನ್ನು ಪೀಠದಿಂದ ಬೇರ್ಪಡಿಸಲು ನಡೆದ ಯತ್ನ ವಿಫಲಗೊಂಡಿದ್ದು, ಅದರ ಗುರುತು ಇಂದಿಗೂ ಕಾಣಿಸುತ್ತದೆ.

 

ಸುಮಾರು 150 ವರ್ಷಗಳ ಹಿಂದೆ ವಿಠಲ ಕಿಣಿ ಎಂಬ ವೈಷ್ಣವ ಕುಟುಂಬ ಈ ಜಾಗವನ್ನು ಖರೀದಿಸಿದ ನಂತರ ಶಿವನ ಮಹಿಮೆ ಅರಿತು ನಿತ್ಯ ಪೂಜೆಯನ್ನು ಆರಂಭಿಸಿತು. ಅಂದಿನಿಂದ ಇಂದಿನವರೆಗೆ ಅವರ ಮನೆತನವೇ ಈ ತುಳುವೇಶ್ವರ ಸನ್ನಿಧಾನದಲ್ಲಿ ಪೂಜಾ ಕೈಂಕರ್ಯವನ್ನು ನಡೆಸುತ್ತಿದೆ.

 

ಇಲ್ಲಿ ಜೀರ್ಣೋದ್ದಾರ ಕಾರ್ಯ ನಡೆಸಬೇಕೆಂಬ ಆಸೆ ಇದ್ದರೂ, ಪರಂಪರೆಯ ನಂಬಿಕೆಯಂತೆ ಯೋಗ್ಯ ಸಮಯ ಬಂದಾಗ ಯೋಗಿಯೊಬ್ಬರ ಮೂಲಕ ಪುನರ್ ಅಭಿವೃದ್ಧಿ ನಡೆಯಲಿದೆ ಎನ್ನಲಾಗುತ್ತಿದೆ.

 

ತುಳುನಾಡಿನಲ್ಲಿ “ತುಳುವೇಶ್ವರ” ಎಂಬ ಹೆಸರಿನ ಇನ್ನೊಂದು ಶಿವ ಸನ್ನಿಧಾನ ಇಲ್ಲದಿರುವುದರಿಂದ, ಕಾಸರಗೋಡಿನಿಂದ ಬೈಂದೂರಿನವರೆಗಿನ ತುಳು ಭಾಷಿಕ ಪ್ರದೇಶಕ್ಕೆ ಈ ದೇವರು ಅಧಿದೇವತೆಯಾಗಿ ಪೂಜಿಸಲ್ಪಡುತ್ತಾನೆ ಎಂಬ ನಂಬಿಕೆ ಸ್ಥಳೀಯರಲ್ಲಿ ಇದೆ. ಪ್ರಕೃತಿ ಮತ್ತು ದೈವಶಕ್ತಿಯ ಸಂಗಮವಾಗಿ ಉಳಿದಿರುವ ಈ ಸನ್ನಿಧಾನ ಭಕ್ತರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದೆ.