09 January 2026 | Join group

ಬಂಟ್ವಾಳ ನರಿಕೊಂಬು ದ. ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಅದ್ದೂರಿ ಶಾಲಾ ವಾರ್ಷಿಕೋತ್ಸವ

  • 06 Jan 2026 12:21:53 AM

ಬಂಟ್ವಾಳ: ತಾಲೂಕಿನ ನರಿಕೊಂಬು ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಇಲ್ಲಿ ಶಾಲಾ ವಾರ್ಷಿಕೋತ್ಸವ ಜನವರಿ 3ರ ಶನಿವಾರದಂದು ಜರಗಿತು.

 

'ಅಕ್ಷರ ಸಂತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ' ರವರನ್ನು ಮೊಗರ್ನಾಡ್ ಲಕ್ಷ್ಮೀನರಸಿಂಹ ದೇವಸ್ಥಾನದ ವಠಾರದಿಂದ ಶಾಲೆಯ ತನಕ ತೆರೆದ ವಾಹನದಲ್ಲಿ ಚೆಂಡೆ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಕರೆತಂದು ಶಾಲಾ ವಾರ್ಷಿಕೋತ್ಸವದ ಕಾರ್ಯಕ್ರಮದ ಧ್ವಜಾರೋಹಣವನ್ನು ಹಾಜಬ್ಬ ವರಿಂದ ನೆರವೇರಿಸಲಾಯಿತು. ನಂತರ ಮಕ್ಕಳಿಂದ ಪಥ ಸಂಚಲನ, ಸಾಮೂಹಿಕ ಶಾರೀರಿಕ ಪ್ರದರ್ಶನಗಳು ಜರಗಿತು.

ನಂತರ ಶಾಲಾ ಲಕ್ಷ್ಮೀ ನರಸಿಂಹ ರಂಗಮಂದಿರದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಅಂಚನ್ ರವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಭಾ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಹಾಗೂ ಮಕ್ಕಳ ಪೋಷಕರಿಗೆ ವಾರ್ಷಿಕೋತ್ಸವದ ನಿಮಿತ್ತ ಮಾಡಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಹಾಗೂ ಪೋಷಕರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

 

ಈ ಸಂದರ್ಭದಲ್ಲಿ ಶಾಲಾ ಪರವಾಗಿ ಹರೇಕಳ ಹಾಜಬ್ಬರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಹಾಜಬ್ಬ " ಶಿಕ್ಷಣಕ್ಕೆ ನೀಡುವ ಸೇವೆಗೆ ದೇವರ ಆಶೀರ್ವಾದ ಖಂಡಿತ ಇರುತ್ತದೆ ಸರ್ವ ಶಿಕ್ಷಣ ಅಭಿಯಾನ ಬರುವ ಮೊದಲೇ ಸರಕಾರಿ ಶಾಲೆಯನ್ನು ಉಳಿಸುವ ಕೆಲಸ ಮಾಡಿದ ಕಾರಣ ಇಂದು ನನಗೆ ರಾಷ್ಟ್ರಮಟ್ಟದ ಅಭಿನಂದನೆ ಸಿಕ್ಕಿರುತ್ತದೆ. ಮಕ್ಕಳು ಭವ್ಯ ಭಾರತದ ಪ್ರತಿನಿಧಿಗಳು. ಉತ್ತಮ ಶಿಕ್ಷಣ ಪಡೆದು ದೇಶ ಸೇವೆ ಮಾಡಬೇಕು. ಸರಕಾರಿ ಶಾಲೆಗಳಲ್ಲಿ ಜೀವನ ಪಾಠವನ್ನು ಕಲಿಸುವುದರ ಮೂಲಕ ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡುವುದು ನಮ್ಮೆಲ್ಲರ ಕರ್ತವ್ಯ ಈ ನಿಟ್ಟಿನಲ್ಲಿ ನರಿಕೊಂಬು ಶಾಲೆಯು ಉಳಿದ ಶಾಲೆಗಳಿಗೆ ಮಾದರಿ ಆಗಿದೆ" ಎಂದರು.

ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರ ಸಮನ್ವಯಾಧಿಕಾರಿ ವಿದ್ಯಾಕುಮಾರಿ, ಹಾಗೂ ಐ ಆರ್ ಟಿ ಸುರೇಖಾ ಇಲಾಖೆ ಪರವಾಗಿ ಶುಭ ಹಾರೈಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಮಮತ ಸಂತೋಷ್ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಶಾಲೆಗೆ ನೀಡಿದ ಅನುದಾನದ ಬಗ್ಗೆ ಮಾಹಿತಿ ಹಂಚಿಕೊಂಡರು.

 

ಉದ್ಘಾಟನಾ ಸಭಾ ಕಾರ್ಯಕ್ರಮದ ನಂತರ ತಾಲೂಕು ಪಂಚಾಯತಿನ ಮೂರು ಲಕ್ಷ ಅನುದಾನದಿಂದ ನಿರ್ಮಾಣವಾದ ವಿಶೇಷ ಚೇತನ ಮಕ್ಕಳ ಶೌಚಾಲಯವನ್ನು ಉದ್ಘಾಟಿಸಲಾಯಿತು. ಈ ಸಂದರ್ಭದ ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷ ಮೋಹಿನಿ ವಾಮನ ಕುಲಾಲ್ ನಾಟಿ, ಪಂಚಾಯತ್ ಸದಸ್ಯರುಗಳಾದ ಪ್ರಕಾಶ್ ಮಡಿಮುಗೇರ್, ಸುರೇಖಾ, ಪದ್ಮಶ್ರೀ ಎಲೆಕ್ಟ್ರಿಕಲ್ಸ್ ಮಾಲಕ ಪದ್ಮನಾಭ ಮಯ್ಯ, ಶ್ರೀ ಕೋದಂಡರಾಮ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ ಕೃಷ್ಣಪ್ಪ ನಾಟಿ, ಶ್ರೀ ಹರೀಶ್ ಕೇದ್ದೆಲ್, ಉದಯ್ ಕುಮಾರ್ ಶೆಟ್ಟಿ ಹೊಸಲಚ್ಚಿಲ್ ಉಪಸ್ಥಿತರಿದ್ದರು.

 

ಸಂಜೆ ಶಾಲಾ ಪೂರ್ವ ಪ್ರಾಥಮಿಕ ತರಗತಿಗಳ ಹಾಗೂ ಒಂದರಿಂದ ಏಳನೇ ತರಗತಿವರೆಗಿನ ಕನ್ನಡ ಹಾಗೂ ಆಂಗ್ಲ ಮಾಧ್ಯಮ ತರಗತಿಗಳ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ಕೃಷ್ಣಪ್ಪ ಬಂಬಿಲ ಸವಣೂರು ರವರ ನಿರ್ದೇಶನದಲ್ಲಿ ಪ್ರದರ್ಶನಗೊಂಡ ಮಕ್ಕಳ ಕಿರು ನಾಟಕ 'ಬಂಗಾರದ ಮೀನು' ಪ್ರೇಕ್ಷಕರ ಗಮನಸೆಳೆಯಿತು.

 

ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಮಾತನಾಡಿ " ಪ್ರಾಥಮಿಕ ಹಂತದ ಶಿಕ್ಷಣ ತುಂಬಾ ಕಠಿಣಕರವಾದ ಕೆಲಸವಾಗಿರುತ್ತದೆ. ಈ ಹಂತದಲ್ಲಿ ಶಿಕ್ಷಕರ ಜವಾಬ್ದಾರಿಯು ಅತಿ ಹೆಚ್ಚಿನದು ಶಿಲ್ಪಿಗಳು ಮೂರ್ತಿ ಕೆತ್ತನೆ ಮಾಡುವಂತೆ ವಿದ್ಯಾರ್ಥಿಗಳನ್ನು ಶಿಕ್ಷಕರು ಉತ್ತಮ ಗುಣಗಳಿಂದ ಕೂಡಿರುವ ಪ್ರಜೆಗಳನ್ನಾಗಿ ರೂಪಿಸುತ್ತಾರೆ. ವಿದ್ಯಾ ಸಂಸ್ಥೆಗಳು ಸರ್ವ ಧರ್ಮಗಳ ಸಹಮತವನ್ನು ಹೊಂದಿರುತ್ತವೆ. ಮೌಲ್ಯಯುತ ಶಿಕ್ಷಣದ ಮೂಲಕ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ" ಎಂದರು.

 

ರೋಟರಿ ಕ್ಲಬ್ ಮಾಜಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಮಾತನಾಡಿ " ವಿದ್ಯಾರ್ಥಿಗಳ ಕಲಿಕೆಯಲ್ಲಿ ಶಿಕ್ಷಕರಷ್ಟೇ ಅಲ್ಲದೆ ಪೋಷಕರೂ ಜವಾಬ್ದಾರಾಗಿರುತ್ತಾರೆ. ಬೇರೆಯವರ ಕಷ್ಟಗಳಿಗೆ ನೆರವಾಗುವ ಮತ್ತು ಇತರರ ದುಃಖಗಳನ್ನು ಪರಿಗಣಿಸುವ ಮೌಲ್ಯದೊಂದಿಗೆ ಹೃದಯ ಸೌಂದರ್ಯ ಇದ್ದ ಜೀವನ ಎಲ್ಲರೂ ನಡೆಸಬೇಕು. ಶಾಲೆಯನ್ನು ಉನ್ನತಿಗೊಳಿಸುವ ಸಹಾಯ ಸೇವೆಯನ್ನು ಒದಗಿಸುವ ಕೆಲಸ ಎಲ್ಲರಿಂದಲೂ ಆಗಬೇಕಾಗಿದೆ" ಎಂದರು.

 

ಶಿಕ್ಷಕ ರತ್ನ ಪ್ರಶಸ್ತಿ ಪುರಸ್ಕೃತ ವೀರಕಂಬ ಮಜಿ ಶಾಲಾ ಶಿಕ್ಷಕಿ ಸಂಗೀತ ಶರ್ಮ ಮಾತನಾಡಿ " ಕಳೆದ ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲಿ ನೀಡಿದ ಮಾತಿಗೆ ತಪ್ಪದೆ ಯಾವುದೇ ಸರಕಾರಿ ಅನುದಾನ ಕಾಯದೆ ನೂತನ ಕಟ್ಟಡ ನಿರ್ಮಿಸಲು ಕಾರ್ಯ ಪ್ರವೃತ್ತರಾದ ರವಿ ಅಂಚನ್ ನೇತೃತ್ವದ ಶಾಲಾಭಿವೃದ್ಧಿ ತಂಡದ ಕಾರ್ಯಾ ಶ್ಲಾಘನೀಯವಾಗಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ದೈವಸ್ಥಾನ ಗಳಿದ್ದ ನರಿಕೊಂಬು ಗ್ರಾಮದ ಜನತೆ ಎಲ್ಲಾ ದೇವಸ್ಥಾನಗಳನ್ನು ಹೇಗೆ ಅಭಿವೃದ್ಧಿ ಪಡಿಸಿದ್ದಿರೋ ಅದೇ ರೀತಿ ಸರ್ವಧರ್ಮದ ದೇಗುಲವಾದ ನರಿಕೊಂಬು ಶಾಲೆಯ ಅಭಿವೃದ್ಧಿಯಲ್ಲಿ ಕೈಜೋಡಿಸಿ" ಎಂದು ಕರೆ ನೀಡಿದರು.

 

ಈ ಸಂದರ್ಭದಲ್ಲಿ ಶಾಲೆಯಲ್ಲಿ ವಿಶೇಷವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಕ್ಕಳನ್ನು ಗುರುತಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯ ವಿನೀತಾ ಪುರುಷೋತ್ತಮ, ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿಯಮಿತ ಶಂಭೂರು ಅಧ್ಯಕ್ಷ ಪುರುಷೋತ್ತಮ ಸಾಲಿಯನ್, ಶ್ರೀ ದುರ್ಗಾ ಪ್ರಾಭಿಕೇಶನ್ ಮಾಲಕ ಉಮೇಶ್ ಬೋಳಂತೂರು, ಅಮೆಚೂರ್ ಕಬಡ್ಡಿ ತೀರ್ಪುಗಾರರ ಮಂಡಳಿ ಅಧ್ಯಕ್ಷ ಸುರೇಶ್ ಮೈರಡ್ಕ, ಅನುಗ್ರಹ ಅರ್ಥ್ ಮೂವರ್ಸ್ ಮೂಲಕ ಪ್ರಕಾಶ್ ವಾಸ್, ಭಯಂಕೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ ಉಮೇಶ್ ನೆಲ್ಲಿಗುಡ್ಡೆ, ಉದ್ಯಮಿ ಸನತ್ ರಕ್ಷಾ ಕೆದ್ದೇಲ್, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಲಕ್ಷ್ಮಿ ಪ್ರಕಾಶ್, ತಾಯಂದಿರಿ ಸಮಿತಿ ಅಧ್ಯಕ್ಷ ಉಷಾಲಾಕ್ಷಿ ಮೊದಲಾದವರು ಉಪಸ್ಥಿತರಿದ್ದರು.

 

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಅಂಚನ್ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಮುಖ್ಯ ಶಿಕ್ಷಕಿ ಸುಜಾತ ಎ ಎಸ್ ಶಾಲಾ ವಾರ್ಷಿಕ ವರದಿ ವಾಚಿಸಿ, ಶಿಕ್ಷಕಿ ವಿಲ್ಮಾ ಪ್ರೆಸಿಲ್ಲಾ ಪಿಂಟೋ ವಂದಿಸಿದರು. ಶಿಕ್ಷಕಿಯರಾದ ದೀಪಿಕಾ ಶೆಟ್ಟಿ ಹಾಗೂ ಶೋಭಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಪ್ರವೀಣ ಕುಮಾರಿ,ಸುಜಾತ, ನತಲಿಯಾ ಸಿಂತಿಯಾ ಮಿನೇಜಸ್,ದಿವ್ಯಶ್ರೀ ಕೆ ಎಸ್, ಪೂಜಾ ,ಮಹೇಶ್ವರಿ,ಹರಿಣಾಕ್ಷಿ ,ಅನಿತಾ,ಭವಾನಿ, ಯಮುನಾ, ದಿವ್ಯಶ್ರೀ ,ಸುನಿತಾ, ನಿಶಾ, ಕೃತಿ, ಕ್ಷಮಾ ಪ್ರಿಂಟರ್ ಮಿಥುನ್, ಶಾಲಾಭಿವೃದ್ಧಿ ಹಾಗೂ ತಾಯಂದಿರ ಸಮಿತಿಯ ಸದಸ್ಯರುಗಳು ಸಹಕರಿಸಿದರು.