14 June 2026 |

ಪರಿಸರದ ನಾಶಕ್ಕೆ ಮಾನವನ ಆಸೆ, ದುರಾಸೆಗಳೇ ಕಾರಣ: ಅನಿಲ್ ಪಂಡಿತ್

  • 13 Jun 2026 08:50:05 PM

ಬಂಟ್ವಾಳ, ಕಲ್ಲಡ್ಕ: "ಸ್ವಚ್ಛ ಪರಿಸರ ನಮ್ಮ ಧ್ಯೇಯ, ಹಸಿರು ಬದುಕು ನಮ್ಮ ಶ್ರೇಯ. ಇಂದು ಮಾನವನು ತನ್ನ ಆಸೆ-ದುರಾಸೆಗಳ ಸರಮಾಲೆಯಿಂದ ಪರಿಸರವನ್ನು ನಾಶಪಡಿಸುತ್ತಾ ಸ್ವಾರ್ಥ ಜೀವನ ನಡೆಸುತ್ತಿದ್ದಾನೆ. ಅಕ್ಷರದಿಂದ ಸಂಸ್ಕಾರ ಬರಬೇಕೇ ಹೊರತು ಅಹಂ ಭಾವನೆ ಬರಬಾರದು. ಪ್ರತಿಯೊಬ್ಬರೂ ತಮ್ಮ ಜನ್ಮದಿನದಂದು ಕನಿಷ್ಠ ಒಂದು ಗಿಡವನ್ನಾದರೂ ನೆಟ್ಟು, ಅದನ್ನು ಜೀವನಪೂರ್ತಿ ಪೋಷಿಸುವುದರಿಂದ ಜೀವನಕ್ಕೆ ಒಂದು ಸಾರ್ಥಕತೆ ಸಿಗುತ್ತದೆ. ಪರಿಸರಕ್ಕೆ ನಾವು ಎಷ್ಟೇ ಕೊಟ್ಟರೂ ಅದು ಅಲ್ಪವೇ. ಏಕೆಂದರೆ, ಪರಿಸರದಿಂದ ನಾವಿದ್ದೇವೆಯೇ ಹೊರತು ನಮ್ಮಿಂದ ಪರಿಸರವಿಲ್ಲ. ಪರಿಸರ ಮುನಿದರೆ ನಮ್ಮ ಬಾಳು ನಿಮಿಷದಲ್ಲೇ ಮುಗಿದುಹೋಗುತ್ತದೆ," ಎಂದು ಸಂಸ್ಕಾರ ಭಾರತಿಯ ಜಿಲ್ಲಾ ಉಪಾಧ್ಯಕ್ಷರಾದ ಅನಿಲ್ ಪಂಡಿತ್ ಹೇಳಿದರು.

 

ಅವರು ಜೂನ್ 15ರ ಶನಿವಾರದಂದು ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ.) ಹಾಗೂ ಜವಾಹರ ಬಾಲ್ ಮಂಚ್ (ಮಂಗಳೂರು, ದಕ್ಷಿಣ ಕನ್ನಡ) ಇವುಗಳ ಸಂಯುಕ್ತ ಆಶ್ರಯದಲ್ಲಿ, ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ (ಮಜಿ, ವೀರಕಂಭ) ಇಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ, ವನಮಹೋತ್ಸವ ಹಾಗೂ ಬಾಲಕಾರ್ಮಿಕ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ವಾತ್ಸಲ್ಯ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯ ಸಂಸ್ಥಾಪಕರು, ಜವಾಹರ ಬಾಲ್ ಮಂಚ್ ದಕ್ಷಿಣ ಕನ್ನಡದ ಜಿಲ್ಲಾಧ್ಯಕ್ಷರು ಹಾಗೂ ಕಿತ್ತೂರು ಚೆನ್ನಮ್ಮ ರಾಜ್ಯ ಪ್ರಶಸ್ತಿ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶೈಲಜಾ ರಾಜೇಶ್ ಮಾತನಾಡಿ, "ಪ್ರಕೃತಿಯ ನಾಶದಿಂದಾಗಿ ಇಂದು ಅನೇಕ ನೈಸರ್ಗಿಕ ವಿಕೋಪಗಳು ಸಂಭವಿಸುತ್ತಿವೆ. ಮಕ್ಕಳಿಗೆ ಪರಿಸರದ ಶಿಕ್ಷಣವನ್ನು ನೀಡಿ ಪ್ರಜ್ಞಾವಂತ ಸಮಾಜವನ್ನು ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ರಕೃತಿ ನಮ್ಮ ಜೀವನಕ್ಕೆ ನೀಡುವ ಪ್ರತಿಯೊಂದು ಉಡುಗರೆಯ ಮೌಲ್ಯವನ್ನು ಅರಿತಾಗ, ಪರಿಸರ ಪ್ರೇಮವು ಕೇವಲ ಒಂದು ಘೋಷಣೆಯಾಗುಳಿಯದೆ ನಮ್ಮ ನಡವಳಿಕೆಯ ಸಂಸ್ಕಾರವಾಗಿ ರೂಪುಗೊಳ್ಳುತ್ತದೆ. ಭೂಮಿಯನ್ನು ಕಾಪಾಡುವುದು ಯಾವುದೋ ಒಂದು ಸಂಸ್ಥೆಯ ಹೊಣೆಗಾರಿಕೆಯಲ್ಲ; ಪ್ರತಿಯೊಬ್ಬರ ಜಾಗೃತಿ, ಜವಾಬ್ದಾರಿ ಮತ್ತು ದಿನನಿತ್ಯದ ಸಣ್ಣ ಸಣ್ಣ ಸತ್ಕಾರ್ಯಗಳಿಂದಲೇ ದೊಡ್ಡ ಬದಲಾವಣೆ ತರಲು ಸಾಧ್ಯ," ಎಂದು ತಿಳಿಸಿದರು.

 

ಸಭಾ ಕಾರ್ಯಕ್ರಮಕ್ಕೂ ಮುನ್ನ ಶಾಲಾ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಪ್ರಕೃತಿಯ ಮಹತ್ವವನ್ನು ಸಾರಲಾಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ 'ಸ್ವಚ್ಛ ಮತ್ತು ಸುಂದರ ಪರಿಸರ' ಎಂಬ ವಿಷಯದ ಕುರಿತು ಚಿತ್ರಕಲೆ ಹಾಗೂ ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತ ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.

 

ವೇದಿಕೆಯಲ್ಲಿ ವಾತ್ಸಲ್ಯ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯ ಸದಸ್ಯರಾದ ಇಂದಿರಾ, ಶಾಲಾ ನಾಯಕ ಮೊಹಮ್ಮದ್ ಹಾರೂನ್ ಫರ್ಹಾನ್ ಹಾಗೂ ಹಿರಿಯ ವಿದ್ಯಾರ್ಥಿ ಲಿಖಿತಾ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸ ಸ್ವಾಗತಿಸಿದರು, ಶಿಕ್ಷಕಿ ಸಂಪ್ರಿಯ ವಂದಿಸಿದರು. ಹಿರಿಯ ಶಿಕ್ಷಕಿ ಸಂಗೀತ ಶರ್ಮ ಪಿ.ಜಿ. ಕಾರ್ಯಕ್ರಮ ನಿರೂಪಿಸಿದರು. ಶಾಲಾ ಸಹಶಿಕ್ಷಕ ವೃಂದದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.