17 August 2026 |

ಬೆಳಕು ಸೇವಾ ಟ್ರಸ್ಟ್‌ ಪೆರಾಜೆ–ಬುಡೋಳಿಯ ಮೂರನೇ ವರ್ಷದ ವಾರ್ಷಿಕೋತ್ಸವ

  • 16 Aug 2026 07:23:18 PM

ಬಂಟ್ವಾಳ, ಬುಡೋಳಿ: ಬೆಳಕು ಸೇವಾ ಟ್ರಸ್ಟ್, ಪೆರಾಜೆ–ಬುಡೋಳಿ ಇದರ ಮೂರನೇ ವರ್ಷದ ವಾರ್ಷಿಕೋತ್ಸವವು ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಡಲ ಅಯ್ಯಪ್ಪ ವ್ರತ ಮಂದಿರದಲ್ಲಿ ನಡೆಯಿತು.

 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಪ್ರಾಯ ಪೈ ಅವರು ಮಾತನಾಡಿ, ಬೆಳಕು ಸೇವಾ ಟ್ರಸ್ಟ್‌ನ ಸಮಾಜಮುಖಿ ಕಾರ್ಯಗಳನ್ನು ಹಾಗೂ ಯುವಕರಲ್ಲಿ ಸಮಾಜ ಸೇವೆಯತ್ತ ಮೂಡಿರುವ ಆಸಕ್ತಿಯನ್ನು ಶ್ಲಾಘಿಸಿದರು.

 

ಪೆರ್ಲಾಪು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಬಾಬು ಪೂಜಾರಿ ಕೊಪ್ಪಳ ಮಾತನಾಡಿ, ಬೆಳಕು ಟ್ರಸ್ಟ್ ಇನ್ನಷ್ಟು ಬೆಳೆಯುವ ಮೂಲಕ ಸುತ್ತಮುತ್ತಲಿನ ಸಂಕಷ್ಟದಲ್ಲಿರುವವರಿಗೆ ನೆರವಾಗಲಿ ಎಂದು ಶುಭ ಹಾರೈಸಿದರು.

 

ಪೆರಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಶಾಲ ಎಂ. ಪೆರಾಜೆ, ಪಂಚಾಯಿತಿ ಸದಸ್ಯ ಹರೀಶ್ ರೈ ಪಾನೋರು, ಶೇರಾ ಉದಯ ಯುವಕ ಮಂಡಲದ ಅಧ್ಯಕ್ಷ ರವಿ ಶೇರಾ ಹಾಗೂ ಮಾಜಿ ಸೈನಿಕ ಕೃಷ್ಣ ಗೌಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.

 

ಈ ಸಂದರ್ಭದಲ್ಲಿ ಸ್ಥಳೀಯ ಅಂಬ್ಯುಲೆನ್ಸ್ ಚಾಲಕರಾದ ಶಂಶೀರ್ ಬುಡೋಳಿ ಹಾಗೂ ಗೌರಿಶಂಕರ್ ಪೆರ್ಲಾಪು ಅವರನ್ನು ಬೆಳಕು ಸೇವಾ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಪುತ್ತೂರಿನ ಪ್ರಜ್ಞಾ ಆಶ್ರಮಕ್ಕೆ ನಗದು ನೆರವು ನೀಡಲಾಗಿದ್ದು, ಯಶೋಧರ ಕೊಡಾಜೆ ಅವರಿಗೆ ಆರೋಗ್ಯ ನಿಧಿಯನ್ನೂ ಹಸ್ತಾಂತರಿಸಲಾಯಿತು.

 

ಟ್ರಸ್ಟ್ ಅಧ್ಯಕ್ಷ ಲೋಹಿತ್ ಮಡಲ ಸ್ವಾಗತಿಸಿದರು. ಕಾರ್ಯದರ್ಶಿ ಪ್ರದೀಪ್ ಮಡಲ ವಂದಿಸಿದರು. ಸದಸ್ಯ ಸಚಿನ್ ಮಂಜೊಟ್ಟಿ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟ್‌ನ ಸದಸ್ಯರು ಹಾಗೂ ಸ್ಥಳೀಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.