31 January 2026 | Join group

ಬಸ್ ಕಂಡಕ್ಟರ್‌ನಿಂದ ಪದ್ಮಶ್ರೀವರೆಗೆ: ಅಂಕೆ ಗೌಡರ ಪುಸ್ತಕ ಪ್ರೀತಿಯ ಅದ್ಭುತ ಪಯಣ!

  • 26 Jan 2026 07:36:25 PM

ಪುಸ್ತಕದ ಮೇಲಿನ ಪ್ರೀತಿ ಮನುಷ್ಯನನ್ನು ಉನ್ನತ ಮಟ್ಟಕ್ಕೆ ಏರಿಸುತ್ತದೆ ಎನ್ನುವುದಕ್ಕೆ ಹಲವಾರು ನಿದರ್ಶನಗಳಿವೆ. ಪುಸ್ತಕ ಓದಿದಷ್ಟು ಜ್ಞಾನಾರ್ಜನೆ ಹೆಚ್ಚುವುದಷ್ಟೇ ಅಲ್ಲದೆ, ವ್ಯಕ್ತಿಗೆ ಸಮಾಜದಲ್ಲಿ ಗೌರವ ಮತ್ತು ಸ್ಥಾನಮಾನವೂ ದೊರಕುತ್ತದೆ. ಯಾವಾಗಲೂ ಸಣ್ಣ ಕಲ್ಪನೆಗಳಿಂದ ಆರಂಭವಾದ ಕನಸುಗಳು, ಅದನ್ನು ಪ್ರೀತಿಯಿಂದ ಪೋಷಿಸಿದರೆ ಒಂದು ದಿನ ಹೆಮ್ಮರವಾಗಿ ಬೆಳೆದು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ತಲುಪಿಸುತ್ತವೆ.

 

ಇದಕ್ಕೆ ನಿದರ್ಶನವಾಗಿರುವವರು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಅಂಕೆ ಗೌಡರು. ಒಂದು ಕಾಲದಲ್ಲಿ ಬಸ್ ಕಂಡಕ್ಟರ್ ಆಗಿ ಸೇವೆ ಸಲ್ಲಿಸಿದ್ದ ಇವರು, ನಿವೃತ್ತಿಯ ನಂತರ ಪಾಂಡವಪುರ ಕೋ-ಆಪರೇಟಿವ್ ಸಕ್ಕರೆ ಕಾರ್ಖಾನೆಯಲ್ಲಿ ಸಮಯಪಾಲಕರಾಗಿ ಕಾರ್ಯನಿರ್ವಹಿಸಿದರು. ಇವತ್ತು ಜನವರಿ 26 ರಂದು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗುವ ಮೂಲಕ ಇಡೀ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.

 

ಪುಸ್ತಕಗಳ ಮೇಲಿನ ಅಪಾರ ಪ್ರೀತಿಯಿಂದ ಅವರ ಜೀವನಶೈಲಿಯೇ ವಿಭಿನ್ನವಾಗಿತ್ತು. ಹಲವಾರು ಬಾರಿ ಜನರು ಅವರ ಪುಸ್ತಕ ಸಂಗ್ರಹದ ಕಾರ್ಯಕ್ಕೆ ಅಪಸ್ವರ ಎತ್ತಿದರೂ, ತಮ್ಮ ಕನಸನ್ನು ಕಟ್ಟುವಲ್ಲಿ ಅಂಕೆ ಗೌಡರು ಹಿಂದೆ ಸರಿಯಲಿಲ್ಲ.

 

ಬಸ್ ಕಂಡಕ್ಟರ್ ಆಗಿದ್ದ ಸಮಯದಲ್ಲಿ ಹಳೆಯ ಪಠ್ಯಪುಸ್ತಕಗಳು, ಹರಿದ ಕಾದಂಬರಿಗಳು, ತ್ಯಜಿಸಲ್ಪಟ್ಟ ನಿಘಂಟುಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ಅವರು ನಿರಂತರವಾಗಿ ತೊಡಗಿಸಿಕೊಂಡಿದ್ದರು. ಹೀಗೆ ಪುಸ್ತಕಗಳನ್ನು ಸಂಗ್ರಹಿಸುತ್ತಾ ‘ಪುಸ್ತಕ ಮನೆ’ ಎಂಬ ವಿಶಿಷ್ಟ ಗ್ರಂಥಾಲಯವನ್ನೇ ನಿರ್ಮಿಸಿ ಕೋಟಿಗಟ್ಟಲೆ ಜನರಿಗೆ ಮಾದರಿಯಾಗಿದ್ದಾರೆ.

 

ಯಾವುದೇ ಪ್ರವೇಶ ಶುಲ್ಕವಿಲ್ಲದೆ, ಯಾವುದೇ ಪ್ರಶ್ನೆ ಕೇಳದೆ, ಗುರುತಿನ ಚೀಟಿ ಬೇಡದೇ ಸಾರ್ವಜನಿಕರಿಗೆ ತೆರೆದಿರುವ ಈ ‘ಪುಸ್ತಕ ಮನೆ’ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳು, ಬರಹಗಾರರು, ನಾಗರಿಕ ಸೇವಾ ಆಕಾಂಕ್ಷಿಗಳು, ಸಂಶೋಧಕರು, ನ್ಯಾಯಾಧೀಶರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಜ್ಞಾನದ ಬಾಗಿಲು ತೆರೆದಿದೆ.

 

ತಾವು ದುಡಿದ ಸಂಬಳದ ಶೇ.80 ರಷ್ಟು ಮೊತ್ತವನ್ನು ಪುಸ್ತಕ ಸಂಗ್ರಹಕ್ಕೆ ಖರ್ಚು ಮಾಡಿದ್ದು, ನಿವೃತ್ತಿಯ ವೇಳೆ ಸಿಕ್ಕ ಸುಮಾರು 40–45 ಲಕ್ಷ ರೂ ಪಿಂಚಣಿ ಮೊತ್ತ, ಮೈಸೂರಿನಲ್ಲಿ ಹೊಂದಿದ್ದ ಮನೆ ಮತ್ತು ಫ್ಲಾಟ್‌ಗಳನ್ನೂ ತಮ್ಮ ಕನಸಿನ ಗ್ರಂಥಾಲಯ ನಿರ್ಮಾಣಕ್ಕೆ ಬಳಸಿದ್ದಾರೆ.

 

75ರ ವಯಸ್ಸಿನಲ್ಲೂ “ಪುಸ್ತಕಗಳೇ ನನ್ನ ಉಸಿರು. ಮುಂದಿನ ಪೀಳಿಗೆಗೆ ಅವುಗಳನ್ನು ಸಂರಕ್ಷಿಸುವುದೇ ನನ್ನ ಕರ್ತವ್ಯ” ಎನ್ನುವ ಅವರ ಮಾತು ಪ್ರತಿಯೊಬ್ಬರಿಗೂ ರೋಮಾಂಚನ ಉಂಟುಮಾಡುತ್ತದೆ. ಪ್ರಸ್ತುತ ಅವರು ತಮ್ಮ ಪತ್ನಿಯೊಂದಿಗೆ ಅದೇ ‘ಪುಸ್ತಕ ಮನೆ’ ಗ್ರಂಥಾಲಯದಲ್ಲಿ ವಾಸಿಸುತ್ತಿದ್ದು, ತಮ್ಮ ಬದುಕನ್ನೇ ಜ್ಞಾನ ಸೇವೆಗೆ ಅರ್ಪಿಸಿದ್ದಾರೆ. ಈ ಗಣರಾಜ್ಯೋತ್ಸವದಂದು ಭಾರತ ಸರ್ಕಾರವು ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.