31 January 2026 | Join group

ಹಸಿವೆಂದರೇನು ತಿಳಿದದ್ದು ನ್ಯೂಯಾರ್ಕಿನಲ್ಲಿ: ಶೆಫ್ ವಿಕಾಸ್ ಖನ್ನಾರ ಬದುಕು ಕಲಿಸಿದ ಜೀವನ ಪಾಠ

  • 30 Jan 2026 02:41:41 AM

ಭಾರತದ ಪ್ರಸಿದ್ಧ ಶೆಫ್ ಹಾಗೂ ನ್ಯೂಯಾರ್ಕ್‌ನಲ್ಲಿ ಯಶಸ್ವಿ ರೆಸ್ಟೋರೆಂಟ್ ನಡೆಸುತ್ತಿರುವ ವಿಕಾಸ್ ಖನ್ನಾ ಅವರ ಬದುಕು ಕೇವಲ ಅಡುಗೆಯ ಕಥೆಯಲ್ಲ ಅದು ಒಂದು ಮಾನವೀಯತೆ, ಸೇವಾಭಾವ ಮತ್ತು ಬದುಕಿನ ಮೌಲ್ಯಗಳ ಪಾಠವೂ ಹೌದು. ಬಿಬಿಸಿಯೊಂದರ ಸಂದರ್ಶನದಲ್ಲಿ ಆಂಕರ್ ಅವರು ವಿಕಾಸ್ ಖನ್ನಾಗೆ ಕೇಳಿದ ಒಂದು ಸರಳ ಪ್ರಶ್ನೆ, ಅವರ ಜೀವನದ ಅತ್ಯಂತ ಆಳವಾದ ಸತ್ಯವನ್ನು ಹೊರಹಾಕಿತು.

 

“ನೀವು ಬಡತನದ ಹಿನ್ನೆಲೆಯಿಂದ ಬಂದವರು. ಭಾರತದಲ್ಲಿ ಹಸಿವಿನ ಅನುಭವ ನಿಮಗಿರಲೇಬೇಕಲ್ಲವೇ?” ಎಂಬ ಪ್ರಶ್ನೆಗೆ ವಿಕಾಸ್ ಖನ್ನಾ ನಗುತ್ತಾ ಈ ರೀತಿ ಉತ್ತರಿಸಿದರು “ಇಲ್ಲ… ನಾನು ಅಮೃತಸರಿನಿಂದ ಬಂದವನು. ಅಲ್ಲಿ ಗುರುದ್ವಾರಗಳಲ್ಲಿ ನಡೆಯುವ ಲಂಗರ್ ವ್ಯವಸ್ಥೆಯಲ್ಲಿ ಯಾರಿಗೂ ಹಸಿವೇ ಉಳಿಯುವುದಿಲ್ಲ. ಹಸಿವೆಂದರೇನು ಎಂಬುದು ನನಗೆ ನಿಜವಾಗಿ ಗೊತ್ತಾದದ್ದು ನ್ಯೂಯಾರ್ಕಿಗೆ ಬಂದ ಮೇಲೆ.” ಎಂದು. ಈ ಮಾತನ್ನು ಕೇಳಿದ ಬಿಬಿಸಿ ನ್ಯೂಸ್ ಚಾನೆಲ್ ನ ವರದಿಗಾರ ನಿಬ್ಬೆರಗಾಗಿದ್ದ.

 

ಈ ಮಾತುಗಳು ಭಾರತೀಯ ಸಂಸ್ಕೃತಿಯಲ್ಲಿನ ಲಂಗರ್ ಪರಂಪರೆಯ ಮಹತ್ವವನ್ನು ನೆನಪಿಸುತ್ತವೆ. ಲಂಗರ್ ಅಂದರೆ ಕೇವಲ ಊಟವಲ್ಲ. ಅದು ಸಮಾನತೆ, ಸೇವೆ ಮತ್ತು ಸಹಾನುಭೂತಿಯ ಮಹಾನ್ ಪಾಠ. ಅಲ್ಲಿ ಶ್ರೀಮಂತ-ಬಡವ, ದೊಡ್ಡವರು-ಚಿಕ್ಕವರು ಎಂಬ ಯಾವುದೇ ಭೇದವಿಲ್ಲ. ಎಲ್ಲರೂ ಒಂದೇ ಸಾಲಿನಲ್ಲಿ ಕುಳಿತು ಒಂದೇ ಆಹಾರವನ್ನು ಸೇವಿಸುತ್ತಾರೆ. ಯಾರಾದರೂ ತಟ್ಟೆ ಹಾಕುತ್ತಾರೆ, ಇನ್ನೊಬ್ಬರು ತೊಳೆಯುತ್ತಾರೆ, ಮತ್ತೊಬ್ಬರು ನೆಲ ಒರೆಸುತ್ತಾರೆ. ಸೇವೆ ಮಾಡುವಾಗ “ನಾನು” ಎಂಬ ಅಹಂಕಾರ ಕರಗಿ, “ನಾವು ಎಲ್ಲರೂ ಒಂದೇ” ಎಂಬ ಭಾವ ಮೂಡುತ್ತದೆ.

 

ಅಮೃತಸರಿನ ಈ ಸಂಸ್ಕೃತಿಯಲ್ಲೇ ಬೆಳೆದ ವಿಕಾಸ್ ಖನ್ನಾಗೆ ಹಸಿವು ಎಂದರೆ ಹೊಟ್ಟೆಯ ಕೊರತೆಯಷ್ಟೇ ಅಲ್ಲ, ಮಾನವೀಯತೆಯ ಕೊರತೆಯೂ ಆಗಿರಬಹುದು ಎಂಬ ಅರಿವು ನ್ಯೂಯಾರ್ಕಿಗೆ ಬಂದ ನಂತರ ಮಾತ್ರ ಉಂಟಾಯಿತು. ವಿದೇಶಿ ಬದುಕಿನಲ್ಲಿ ಆಹಾರ ಸುಲಭವಾಗಿ ದೊರೆಯದ ದಿನಗಳು, ಒಂಟಿತನದ ಅನುಭವಗಳು ಮತ್ತು ಹೋರಾಟದ ಕ್ಷಣಗಳು ಅವರಿಗೆ ಬದುಕಿನ ನಿಜವಾದ ಪಾಠ ಕಲಿಸಿತು.

 

ಇಂದು ಅವರು ಮಾಸ್ಟರ್ ಶೆಫ್ ಇಂಡಿಯಾದ ತೀರ್ಪುಗಾರರಾಗಿದ್ದು, ಜಗತ್ತಿನಾದ್ಯಂತ ಭಾರತದ ಅಡುಗೆಯನ್ನು ಪರಿಚಯಿಸುವ ಮಹತ್ವದ ಪಾತ್ರ ವಹಿಸಿದ್ದಾರೆ. ಆದರೆ ಅವರ ಮಾತುಗಳಲ್ಲಿ ಸ್ಪಷ್ಟವಾಗಿ ಮೂಡುವ ಸಂದೇಶ ಒಂದೇ - ಅಡುಗೆಯ ನಿಜವಾದ ರುಚಿ ಪದಾರ್ಥಗಳಲ್ಲಿ ಮಾತ್ರವಲ್ಲ, ಮಾನವೀಯತೆಯಲ್ಲಿದೆ. ಊಟ ಎನ್ನುವುದು ಹೊಟ್ಟೆ ತುಂಬಿಸುವ ಸಾಧನವಷ್ಟೇ ಅಲ್ಲ, ಅದು ಹೃದಯಗಳನ್ನು ಜೋಡಿಸುವ ಶಕ್ತಿಯೂ ಹೌದು ಎಂಬುದನ್ನು ಅವರ ಬದುಕೇ ನಮಗೆ ತೋರಿಸುತ್ತದೆ.

 

ವಿಕಾಸ್ ಖನ್ನಾರ ಈ ಅನುಭವಗಳು, “ಹಸಿವು ಎಂದರೆ ಏನು?” ಎಂಬ ಪ್ರಶ್ನೆಗೆ ಕೇವಲ ದೈಹಿಕ ಉತ್ತರವಲ್ಲ, ಸಾಮಾಜಿಕ ಮತ್ತು ಮಾನಸಿಕ ಅರ್ಥವನ್ನೂ ನೀಡುತ್ತವೆ. ಲಂಗರ್ ಸಂಸ್ಕೃತಿ, ಸೇವಾಭಾವ ಮತ್ತು ಸಹಾನುಭೂತಿ ಇವೆಲ್ಲವೂ ಬದುಕನ್ನು ಸುಂದರಗೊಳಿಸುವ ನಿಜವಾದ ರುಚಿಗಳು ಎಂಬುದನ್ನು ಈ ಕಥೆ ನಮಗೆ ನೆನಪಿಸುತ್ತದೆ. ಈ ರೀತಿಯ ವ್ಯವಸ್ಥೆ ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ.