29 June 2026 |

ಅಯೋಧ್ಯೆ ರಾಮಮಂದಿರ ಹುಂಡಿ ಹಣಕ್ಕೆ ಸಂಘಟಿತ ಕನ್ನ: ತಿಂಗಳೊಳಗೆ 70 ಬಾರಿ ಕಳವು, ₹7.5 ಕೋಟಿ ದುರ್ಬಳಕೆ ಶಂಕೆ

  • 28 Jun 2026 10:33:56 AM

ಅಯೋಧ್ಯೆ: ಭಕ್ತರು ಅರ್ಪಿಸಿದ ಕಾಣಿಕೆ ಹಣ ಮತ್ತು ಅಮೂಲ್ಯ ಆಭರಣಗಳನ್ನು ಸಂಘಟಿತವಾಗಿ ಕಳವು ಮಾಡುತ್ತಿದ್ದ ಎಂಟು ಮಂದಿಯ ತಂಡದ ಬಗ್ಗೆ ವಿಶೇಷ ತನಿಖಾ ದಳ (ಎಸ್‌ಐಟಿ) ಬೆಚ್ಚಿಬೀಳಿಸುವ ಮಾಹಿತಿಯನ್ನು ಬಹಿರಂಗಪಡಿಸಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಈ ವರ್ಷದ ಏಪ್ರಿಲ್ 27ರಿಂದ ಜೂನ್ 5ರವರೆಗೆ ಕೇವಲ ಒಂದು ತಿಂಗಳ ಅವಧಿಯಲ್ಲಿ 70 ಬಾರಿ ಕಳವು ನಡೆದಿರುವುದು ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಸುಮಾರು ₹7.5 ಕೋಟಿ ಮೌಲ್ಯದ ನಗದು ಹಾಗೂ ಚಿನ್ನ-ಬೆಳ್ಳಿ ಆಭರಣಗಳು ದುರ್ಬಳಕೆಯಾಗಿರುವ ಶಂಕೆ ವ್ಯಕ್ತವಾಗಿದೆ.

 

ಎಸ್‌ಐಟಿ ವರದಿ ಪ್ರಕಾರ, ಕಳವು ನಡೆಸಲು ಆರೋಪಿಗಳು ಹಲವು ತಂತ್ರಗಳನ್ನು ಅನುಸರಿಸುತ್ತಿದ್ದರು. ಹುಂಡಿಯ ಹಣ ಎಣಿಸುವ ವೇಳೆ ಒಬ್ಬ ಸಿಬ್ಬಂದಿ ಉದ್ದೇಶಪೂರ್ವಕವಾಗಿ ಸಿಸಿಟಿವಿ ಕ್ಯಾಮೆರಾ ಎದುರು ನಿಂತು ದೃಶ್ಯವನ್ನು ಮರೆಮಾಡುತ್ತಿದ್ದ. ಇದೇ ವೇಳೆ ಮತ್ತೊಬ್ಬ ಸಿಬ್ಬಂದಿ ಎಣಿಕೆ ನಡೆಯುತ್ತಿದ್ದ ನೋಟುಗಳ ಪೈಕಿ ಕೆಲವು ನೋಟುಗಳನ್ನು ತನ್ನ ಬಟ್ಟೆಯೊಳಗೆ ಅಡಗಿಸಿಕೊಳ್ಳುತ್ತಿದ್ದ ಎನ್ನಲಾಗಿದೆ.

 

ಇನ್ನೊಂದು ವಿಧಾನದಲ್ಲಿ, ನೋಟಿನ ಬಂಡಲ್‌ಗಳಿಗೆ ಹೆಚ್ಚುವರಿಯಾಗಿ ಕೆಲವು ನೋಟುಗಳನ್ನು ಸೇರಿಸಲಾಗುತ್ತಿತ್ತು. ಬಳಿಕ ಆ ಹಣವನ್ನು ಬ್ಯಾಂಕ್‌ಗೆ ಸಾಗಿಸುವ ಸಂದರ್ಭದಲ್ಲಿ ಸೇರಿಸಿದ್ದ ನೋಟುಗಳನ್ನು ಗುಪ್ತವಾಗಿ ತೆಗೆದುಕೊಳ್ಳಲಾಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

 

ನಗದು ಮಾತ್ರವಲ್ಲದೆ, ಭಕ್ತರು ಶ್ರೀರಾಮನಿಗೆ ಕಾಣಿಕೆಯಾಗಿ ಅರ್ಪಿಸಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳೂ ಕಳ್ಳರ ಕೈ ಸೇರಿವೆ. ಓಲೆ, ನತ್ತು, ಬಳೆ, ಗೆಜ್ಜೆ ಸೇರಿದಂತೆ ಹಲವು ಅಮೂಲ್ಯ ವಸ್ತುಗಳು ಕಾಣೆಯಾಗಿರುವ ಮಾಹಿತಿ ಲಭ್ಯವಾಗಿದೆ.

 

ದೇವಾಲಯದಿಂದ ಸಿಬ್ಬಂದಿ ಹೊರಹೋಗುವಾಗ ಕಡ್ಡಾಯವಾಗಿ ದೇಹ ತಪಾಸಣೆ ನಡೆಸಬೇಕಿದ್ದರೂ, ಆರಂಭದಲ್ಲಿ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದ್ದ ಈ ಕ್ರಮ ನಂತರ ನಿರ್ಲಕ್ಷ್ಯಕ್ಕೊಳಗಾಯಿತು. ಇದೇ ಅವಕಾಶವನ್ನು ಬಳಸಿಕೊಂಡ ಆರೋಪಿಗಳು ನಗದು ಮತ್ತು ಆಭರಣಗಳನ್ನು ತಮ್ಮ ಉಡುಪುಗಳೊಳಗೆ ಅಡಗಿಸಿಕೊಂಡು ಹೊರಗೆ ಸಾಗಿಸುತ್ತಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

ರಹಸ್ಯವಾಗಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿದ ಬಳಿಕ ಈ ಕಳವುಗಳ ಸರಣಿ ಬೆಳಕಿಗೆ ಬಂದಿದೆ. ತನಿಖೆಯ ವೇಳೆ ಇದುವರೆಗೆ ಸುಮಾರು ₹80 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಈ ಕಳವು ಜಾಲವು 2024ರ ಜನವರಿಯಲ್ಲಿ ರಾಮಮಂದಿರ ಸಾರ್ವಜನಿಕರಿಗೆ ತೆರೆಯಲಾದ ಅವಧಿಯಿಂದಲೇ ಕಾರ್ಯನಿರ್ವಹಿಸುತ್ತಿತ್ತು ಎಂಬ ಅನುಮಾನವನ್ನು ಎಸ್‌ಐಟಿ ತನ್ನ ಪ್ರಾಥಮಿಕ ವರದಿಯಲ್ಲಿ ವ್ಯಕ್ತಪಡಿಸಿದೆ.