ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶನಿವಾರದ ಶಾಲಾ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಇನ್ನು ಮುಂದೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶನಿವಾರ ಮಾತ್ರ ಬೆಳಗ್ಗೆ 8.30ರಿಂದ ಮಧ್ಯಾಹ್ನ 12.30ರವರೆಗೆ ತರಗತಿಗಳು ನಡೆಯಲಿವೆ. ಶಿಕ್ಷಣ ಇಲಾಖೆ ರಾಜ್ಯಾದ್ಯಂತ ಏಕರೂಪದ ವೇಳಾಪಟ್ಟಿಯನ್ನು ಜಾರಿಗೊಳಿಸಿದ್ದು, ಇದು ಜೂನ್ 27ರಿಂದ ಜಾರಿಗೆ ಬಂದಿದೆ.
ಈವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಶನಿವಾರದ ಶಾಲಾ ಸಮಯದಲ್ಲಿ ವ್ಯತ್ಯಾಸವಿತ್ತು. ಕೆಲವು ಶಾಲೆಗಳು ಬೆಳಗ್ಗೆ 7.30ರಿಂದ 11.30ರವರೆಗೆ, ಇನ್ನೂ ಕೆಲವು ಶಾಲೆಗಳು ಬೆಳಗ್ಗೆ 8ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತಿದ್ದವು. ಈ ಅಸಮಾನತೆಯನ್ನು ನಿವಾರಿಸಲು ರಾಜ್ಯದಾದ್ಯಂತ ಒಂದೇ ರೀತಿಯ ವೇಳಾಪಟ್ಟಿಯನ್ನು ಅನುಸರಿಸುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ.
ಇತ್ತೀಚೆಗೆ ರಾಜ್ಯ ಸರ್ಕಾರ ಸರ್ಕಾರಿ ನೌಕರರ ಹಾಜರಾತಿಗಾಗಿ ಎಐ ಆಧಾರಿತ ಕರ್ತವ್ಯ ಮೊಬೈಲ್ ಅಪ್ಲಿಕೇಷನ್ ಮೂಲಕ ಡಿಜಿಟಲ್ ಹಾಜರಾತಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ಹಿಂದೆ ಶಿಕ್ಷಕರ ಹಾಜರಾತಿಯನ್ನು ಹಾಜರಾತಿ ಪುಸ್ತಕದಲ್ಲಿ ದಾಖಲಿಸಲಾಗುತ್ತಿತ್ತು. ಶನಿವಾರ ಸಾರಿಗೆ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳಿಂದ ಸ್ವಲ್ಪ ತಡವಾಗಿ ಬಂದರೂ ಹೆಚ್ಚಿನ ತೊಂದರೆ ಎದುರಾಗುತ್ತಿರಲಿಲ್ಲ. ಆದರೆ ಹೊಸ ಡಿಜಿಟಲ್ ವ್ಯವಸ್ಥೆಯಲ್ಲಿ ಅಲ್ಪ ತಡವಾದರೂ ಗೈರುಹಾಜರಿಯಂತೆ ದಾಖಲಾಗುವ ಸಾಧ್ಯತೆ ಇದೆ.
ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಸಾರಿಗೆಯನ್ನೇ ಅವಲಂಬಿಸಿರುವ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಈ ಸಮಸ್ಯೆಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಶನಿವಾರದ ಶಾಲಾ ಸಮಯವನ್ನು ಪರಿಷ್ಕರಿಸುವಂತೆ ಶಿಕ್ಷಕರಿಂದ ಈ ಕುರಿತು ಬೇಡಿಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲೇ ಶಿಕ್ಷಣ ಇಲಾಖೆ ಹೊಸ ಸಮಯವನ್ನು ಜಾರಿಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜಾರಿಗೆ ತರಲಾಗಿರುವ ಈ ಹೊಸ ವೇಳಾಪಟ್ಟಿಯನ್ನು ಕರ್ತವ್ಯ ಅಪ್ಲಿಕೇಷನ್‌ನಲ್ಲೂ ನವೀಕರಿಸಲಾಗಿದ್ದು, ಜೂನ್ 27ರಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶನಿವಾರ ಮಾತ್ರ ಈ ಸಮಯ ಅನ್ವಯವಾಗಲಿದೆ.





