29 June 2026 |

ವೃದ್ಧೆಯ ಚಿನ್ನದ ಸರ ಕಸಿದುಕೊಂಡ ಪ್ರಕರಣ ಭೇದನೆ; ಇಬ್ಬರು ಆರೋಪಿಗಳ ಬಂಧನ, ಒಬ್ಬ ಪರಾರಿ

  • 28 Jun 2026 02:31:55 PM

ಮಂಗಳೂರು: ನಗರದ ಪಾಂಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ವೃದ್ಧ ಮಹಿಳೆಯೊಬ್ಬರ ಚಿನ್ನದ ಸರ ಕಸಿದುಕೊಂಡ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಪೊಲೀಸರ ವಶದಿಂದ ತಪ್ಪಿಸಿಕೊಂಡಿದ್ದು, ಆತನಿಗಾಗಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ.

 

ಬಂಧಿತ ಆರೋಪಿಗಳನ್ನು ಉತ್ತರ ಪ್ರದೇಶದ ಮುಜಫ್ಫರ್ ನಗರದ ರವಿ ಬೌರಾ (39) ಹಾಗೂ ಗೊಂಡಾ ಜಿಲ್ಲೆಯ ಕನೀಲ್ ಗಂಜ್‌ನ ಶಿಶಾಮೌ ಗ್ರಾಮದ ಮೊಹಮ್ಮದ್ ಸಾಹೀಲ್ ಅಲಿಯಾಸ್ ಸಿದ್ದಿಕಿ (26) ಎಂದು ಗುರುತಿಸಲಾಗಿದೆ. ಬಾಗಲಕೋಟೆ ಮೂಲದ ಅಲ್ತಾಫ್ ಹುಸೈನ್ (40) ಪರಾರಿಯಾಗಿರುವ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

 

ಜೂನ್ 14ರಂದು ಮಧ್ಯಾಹ್ನ ಸೂಟರ್ ಪೇಟೆ ಮೈದಾನದ ಸಮೀಪ ಸಂಕ್ರಮಣ ಪೂಜೆಗೆ ತೆರಳುತ್ತಿದ್ದ ಪ್ರಭಾವತಿ ಎಂಬ ಹಿರಿಯ ಮಹಿಳೆಯನ್ನು ಮೂವರು ಆರೋಪಿಗಳು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿದ್ದರು. ಬಳಿಕ ವಿಳಾಸ ಕೇಳುವ ನೆಪದಲ್ಲಿ ಹಿಂದಿಯಲ್ಲಿ ಮಾತುಕತೆ ನಡೆಸಿ, ಮಹಿಳೆಯನ್ನು ಕೆಳಗೆ ಬೀಳಿಸಿ ಸುಮಾರು 12 ಗ್ರಾಂ ತೂಕದ, ಅಂದಾಜು 1.5 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದರು. ಈ ಸಂಬಂಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

 

ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಗಳು ರೈಲಿನ ಮೂಲಕ ಕೇರಳದತ್ತ ತೆರಳಿರುವುದು ಪತ್ತೆಯಾಯಿತು. ಬಳಿಕ ಅವರ ಚಹರೆಯ ಆಧಾರದ ಮೇಲೆ ವಿಶೇಷ ನಿಗಾವಹಿಸಿ ಹುಡುಕಾಟ ನಡೆಸಲಾಗುತ್ತಿತ್ತು.

 

ಈ ನಡುವೆ ಮತ್ತೊಂದು ಕಳವು ನಡೆಸುವ ಉದ್ದೇಶದಿಂದ ನಗರಕ್ಕೆ ಮರಳಿದ್ದ ಮೂವರು ಆರೋಪಿಗಳು ಜೂನ್ 26ರಂದು ಪೊಲೀಸರ ಬಲೆಗೆ ಬಿದ್ದರು. ಶುಕ್ರವಾರ ಬೆಳಿಗ್ಗೆ ರೊಸಾರಿಯೊ ಶಾಲೆ ರಸ್ತೆಯ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಅವರನ್ನು ಗಸ್ತು ಪೊಲೀಸರು ಪ್ರಶ್ನಿಸಿದ್ದಾರೆ. ತಮ್ಮ ಬಗ್ಗೆ ಸ್ಪಷ್ಟ ಮಾಹಿತಿ ನೀಡಲು ಹಿಂಜರಿದ ಅವರು, ಮುಂಬೈನಿಂದ ಬಟ್ಟೆ ವ್ಯಾಪಾರಕ್ಕಾಗಿ ಬಂದಿರುವುದಾಗಿ ಹೇಳಿದ್ದರು. ಆದರೆ ವ್ಯಾಪಾರದ ಸಂಬಂಧ ಯಾವುದೇ ಸಮರ್ಪಕ ಮಾಹಿತಿ ನೀಡದ ಹಿನ್ನೆಲೆಯಲ್ಲಿ ವಿಚಾರಣೆ ತೀವ್ರಗೊಳಿಸಲಾಯಿತು.

 

ಪೊಲೀಸರ ನಿರಂತರ ಪ್ರಶ್ನೆಗೆ ಉತ್ತರಿಸುವ ವೇಳೆ ಅಲ್ತಾಫ್ ಹುಸೈನ್ ಸೂಟರ್ ಪೇಟೆಯಲ್ಲಿ ನಡೆದ ಸರ ಕಳವು ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾನೆ. ತಕ್ಷಣವೇ ಮೂವರನ್ನೂ ವಶಕ್ಕೆ ಪಡೆಯಲಾಯಿತು.

 

ನಂತರ ಅವರನ್ನು ಪಾಂಡೇಶ್ವರ ಪೊಲೀಸ್ ಠಾಣೆಗೆ ಕರೆದೊಯ್ಯುವಾಗ ಅಲ್ತಾಫ್ ಹುಸೈನ್ ಪೊಲೀಸ್ ಸಿಬ್ಬಂದಿಯನ್ನು ತಳ್ಳಿಹಾಕಿ ಪರಾರಿಯಾಗಿದ್ದಾನೆ. ಈ ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ವಿನಾಯಕ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆರೋಪಿಗಳ ವಿರುದ್ಧ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೂ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.

 

ಪರಾರಿಯಾಗಿರುವ ಅಲ್ತಾಫ್ ಹುಸೈನ್ ರೈಲಿನ ಮೂಲಕ ಕೇರಳಕ್ಕೆ ತೆರಳಿರುವ ಶಂಕೆ ವ್ಯಕ್ತವಾಗಿದ್ದು, ಆತನ ಬಂಧನಕ್ಕಾಗಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ. ನಗರ ಸೇರಿದಂತೆ ಹೊರ ಜಿಲ್ಲೆಗಳು ಮತ್ತು ಇತರೆ ರಾಜ್ಯಗಳಿಗೂ ಮಾಹಿತಿ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಕಳ್ಳತನ ನಡೆಸುವ ಉದ್ದೇಶದಿಂದ ಕೆಲ ದಿನಗಳ ಹಿಂದೆ ಮಂಗಳೂರಿಗೆ ಬಂದಿದ್ದರೆಂದು ತಿಳಿದುಬಂದಿದೆ. ಅವರು ನಗರದ ಲಾಡ್ಜ್ ಒಂದರಲ್ಲಿ ತಂಗಿದ್ದು, ನಂತರ ಇಬ್ಬರು ಕಾಸರಗೋಡಿನ ಮಂಜೇಶ್ವರ ಕಡೆಗೆ ತೆರಳಿದ್ದರು. ಅಲ್ಲಿ ಕರ್ನಾಟಕ ನೋಂದಣಿಯ ದ್ವಿಚಕ್ರ ವಾಹನವನ್ನು ಕಳವು ಮಾಡಿ ಮಂಗಳೂರಿಗೆ ಮರಳಿದ ಅವರು, ಜೂನ್ 14ರಂದು ಸೂಟರ್ ಪೇಟೆಯಲ್ಲಿ ವೃದ್ಧ ಮಹಿಳೆಯ ಚಿನ್ನದ ಸರ ಕಸಿದು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.