29 June 2026 |

ಮಂಗಳೂರು: ಖಾಸಗಿ ಕಾಲೇಜು ಬಸ್‌ ಢಿಕ್ಕಿ: ಇನ್ಫೋಸಿಸ್ ಉದ್ಯೋಗಿ ದುರ್ಮರಣ

  • 28 Jun 2026 11:31:21 AM

ಉಳ್ಳಾಲ: ಖಾಸಗಿ ಕಾಲೇಜಿನ ಬಸ್‌ ಮತ್ತು ಸ್ಕೂಟರ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್‌ ಸವಾರರೊಬ್ಬರು ಮೃತಪಟ್ಟಿರುವ ಘಟನೆ ಉಳ್ಳಾಲ ಸಮೀಪದ ನಾಟೇಕಲ್‌ನಲ್ಲಿ ನಡೆದಿದೆ.

 

ಅಪಘಾತದಲ್ಲಿ ಮೃತಪಟ್ಟವರು ಚಿಕ್ಕಮಗಳೂರು ಮೂಲದ 31 ವರ್ಷದ ಇನ್ಫೋಸಿಸ್ ಉದ್ಯೋಗಿ ಪ್ರಜ್ವಲ್ ಎಂದು ಗುರುತಿಸಲಾಗಿದೆ. ಘಟನೆಯ ವೇಳೆ ಬಸ್ಸಿನಲ್ಲಿದ್ದ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

 

ಮಾಹಿತಿಯ ಪ್ರಕಾರ, ಪ್ರಜ್ವಲ್ ಅವರು ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದಾಗ ಕೊಣಾಜೆಯಿಂದ ಮಂಗಳೂರು ಕಡೆಗೆ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಕಾಲೇಜಿನ ಬಸ್‌ ಢಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಸ್ಕೂಟರ್‌ ಸವಾರ ಬಸ್‌ನ ಕೆಳಗೆ ಸಿಲುಕಿಕೊಂಡಿದ್ದಾರೆ.

 

ತಕ್ಷಣ ಸ್ಥಳಕ್ಕಾಗಮಿಸಿದ ರಕ್ಷಣಾ ಸಿಬ್ಬಂದಿ ಕ್ರೇನ್‌ ಸಹಾಯದಿಂದ ಬಸ್‌ನ್ನು ಮೇಲಕ್ಕೆತ್ತಿ ಗಾಯಾಳುವನ್ನು ಹೊರತೆಗೆದಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

 

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು, ಕೆಲಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿ, ಸಂಚಾರವನ್ನು ಸುಗಮಗೊಳಿಸಿದರು.