01 July 2026 |

ಇಂದಿನಿಂದ ಮನೆಮನೆಗೆ ಎಸ್ಎಲ್ಆರ್ ತಂಡಗಳ ಭೇಟಿ: ಮತದಾರರ ಮಾಹಿತಿ ಪರಿಶೀಲನೆಗೆ ರಾಜ್ಯವ್ಯಾಪಿ ಅಭಿಯಾನ

  • 30 Jun 2026 10:48:29 AM

ದಕ್ಷಿಣ ಕನ್ನಡ: ರಾಜ್ಯದ ಮತದಾರರ ಪಟ್ಟಿಯನ್ನು ನವೀಕರಿಸಿ ಹೆಚ್ಚು ನಿಖರಗೊಳಿಸುವ ಉದ್ದೇಶದಿಂದ ವಿಶೇಷ ಪರಿಷ್ಕರಣೆ ಕಾರ್ಯಕ್ಕೆ ಸೋಮವಾರದಿಂದ ಚಾಲನೆ ನೀಡಲಾಗಿದೆ. ಇದರ ಅಂಗವಾಗಿ ಎಸ್ಎಲ್ಆರ್ ತಂಡಗಳು ಮತ್ತು ಬೂತ್ ಮಟ್ಟದ ಅಧಿಕಾರಿಗಳು ಮನೆಮನೆಗೆ ತೆರಳಿ ಮತದಾರರ ವಿವರಗಳನ್ನು ಪರಿಶೀಲಿಸಲಿದ್ದಾರೆ.

 

ಜೂನ್ 30ರಿಂದ ಜುಲೈ 29ರವರೆಗೆ ನಡೆಯಲಿರುವ ಈ ಅಭಿಯಾನದಲ್ಲಿ ರಾಜ್ಯದಾದ್ಯಂತ 59,050 ಬೂತ್ ಮಟ್ಟದ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ. ಮತದಾರರ ಹೆಸರು, ವಿಳಾಸ, ವಯಸ್ಸು ಸೇರಿದಂತೆ ವಿವಿಧ ಮಾಹಿತಿಗಳನ್ನು ಪರಿಶೀಲಿಸಿ ಅಗತ್ಯ ಬದಲಾವಣೆಗಳನ್ನು ದಾಖಲಿಸುವ ಕಾರ್ಯ ನಡೆಯಲಿದೆ.

 

ಈ ಅವಧಿಯಲ್ಲಿ ಹೊಸ ಮತದಾರರ ನೋಂದಣಿ, ಹೆಸರು ಮತ್ತು ವಿಳಾಸ ತಿದ್ದುಪಡಿ, ಸ್ಥಳಾಂತರಗೊಂಡವರ ವಿವರಗಳ ನವೀಕರಣ ಹಾಗೂ ಮೃತಪಟ್ಟ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆಯೂ ಕೈಗೊಳ್ಳಲಾಗುತ್ತದೆ.

 

ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸಮಗ್ರ ಪರಿಶೀಲನೆ ನಡೆಯಲಿದ್ದು, ಮತದಾರರ ಪಟ್ಟಿಯ ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.

 

ಮನೆಗಳಿಗೆ ಭೇಟಿ ನೀಡುವ ಅಧಿಕಾರಿಗಳಿಗೆ ಅಗತ್ಯ ದಾಖಲೆಗಳನ್ನು ಒದಗಿಸಿ ಸಾರ್ವಜನಿಕರು ಸಹಕರಿಸುವಂತೆ ಚುನಾವಣಾ ಇಲಾಖೆ ಮನವಿ ಮಾಡಿದೆ. ಮತದಾರರ ಪಟ್ಟಿಯಲ್ಲಿ ಯಾವುದೇ ದೋಷಗಳು ಕಂಡುಬಂದಲ್ಲಿ ಈ ಅಭಿಯಾನದ ಅವಧಿಯಲ್ಲಿ ತಿದ್ದುಪಡಿ ಮಾಡಿಸಿಕೊಳ್ಳುವ ಅವಕಾಶವೂ ಲಭ್ಯವಿದೆ.