10 July 2026 |

ಪರಶುರಾಮಪುರಿ ಎಂದು ಮರುನಾಮಕರಣಗೊಂಡ ಉತ್ತರ ಪ್ರದೇಶದ ಜಲಾಲಾಬಾದ್

  • 09 Jul 2026 12:27:37 PM

ಲಖ್ನೋ: ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಮತ್ತೊಂದು ನಗರಕ್ಕೆ ಹೊಸ ಹೆಸರು ನೀಡಿದೆ. ಶಹಜಹಾನ್‌ಪುರ ಜಿಲ್ಲೆಯ ಜಲಾಲಾಬಾದ್ ಪಟ್ಟಣವನ್ನು ಇನ್ನುಮುಂದೆ ‘ಪರಶುರಾಮಪುರಿ’ ಎಂದು ಕರೆಯಲಾಗುತ್ತದೆ.

 

ಜಲಾಲಾಬಾದ್‌ನ ಹೆಸರನ್ನು ಪರಶುರಾಮಪುರಿ ಎಂದು ಬದಲಾಯಿಸುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅಧಿಕೃತ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಈ ಹಿಂದೆ ಮನವಿ ಸಲ್ಲಿಸಿತ್ತು.

 

ಹಲವಾರು ವರ್ಷಗಳ ಕಾಲ ನಡೆದ ಪ್ರಕ್ರಿಯೆಯ ಬಳಿಕ ಕೇಂದ್ರ ಸರ್ಕಾರವೂ ಆಗಸ್ಟ್ ತಿಂಗಳಲ್ಲಿ ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿತ್ತು. ಈ ಪ್ರದೇಶವನ್ನು ಮೊದಲು ಮೊಘಲ್ ಚಕ್ರವರ್ತಿ ಜಲಾಲುದ್ದೀನ್ ಮುಹಮ್ಮದ್ ಅಕ್ಬರ್ ಅವರ ಹೆಸರಿನ ಆಧಾರದ ಮೇಲೆ ಜಲಾಲಾಬಾದ್ ಎಂದು ಕರೆಯಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಹಿಂದೂ ಪುರಾಣಗಳ ಪ್ರಕಾರ ವಿಷ್ಣುವಿನ ಅವತಾರರಾದ ಪರಶುರಾಮರ ಜನ್ಮಸ್ಥಳವೆಂದು ನಂಬಲಾಗುವ ಹಿನ್ನೆಲೆ ಈ ಪಟ್ಟಣಕ್ಕೆ ಪರಶುರಾಮಪುರಿ ಎಂಬ ಹೊಸ ಹೆಸರನ್ನು ನೀಡಲಾಗಿದೆ.

 

ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಲವು ನಗರಗಳು ಮತ್ತು ಐತಿಹಾಸಿಕ ಸ್ಥಳಗಳ ಹೆಸರನ್ನು ಬದಲಾಯಿಸಲಾಗಿದೆ. 2018ರಲ್ಲಿ ಅಲಹಾಬಾದ್ ನಗರದ ಹೆಸರನ್ನು ಪ್ರಯಾಗ್‌ರಾಜ್ ಎಂದು ಬದಲಾಯಿಸಲಾಗಿತ್ತು. ಅದೇ ರೀತಿ ಮುಸ್ತಫಾಬಾದ್ ಪ್ರದೇಶಕ್ಕೂ ಕಬೀರ್ ಧಾಮ್ ಎಂಬ ಹೊಸ ಹೆಸರನ್ನು ನೀಡಲಾಗಿತ್ತು.