10 July 2026 |

ಚಾರ್ಮಾಡಿ-ಉಜಿರೆ ಹೆದ್ದಾರಿಯಲ್ಲಿ ಕಾರುಗಳ ಭೀಕರ ಡಿಕ್ಕಿ; ಆರು ಮಂದಿ ಗಾಯ, ಅಪಾಯದಿಂದ ಪಾರು

  • 09 Jul 2026 05:42:51 PM

ಬೆಳ್ತಂಗಡಿ: ತಾಲೂಕಿನ ಮುಂಡಾಜೆ ಗ್ರಾಮದ ಸೀಟ್ ಕಾಡ್ ಸಮೀಪದ ಚಾರ್ಮಾಡಿ–ಉಜಿರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಬೆಳಿಗ್ಗೆ ಎರಡು ಕಾರುಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಭಾರೀ ಅಪಘಾತ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಎರಡೂ ವಾಹನಗಳು ತೀವ್ರವಾಗಿ ಹಾನಿಗೊಳಗಾಗಿದ್ದರೂ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

 

ಈ ಅಪಘಾತದಲ್ಲಿ ಒಟ್ಟು ಆರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಂಗಳೂರು ಕಾವೂರು ನಿವಾಸಿಗಳಾದ ವಿನಿತಾ (22), ಗೌರಮ್ಮ (49), ಕೊಟ್ಟೇಗೌಡ (55) ಹಾಗೂ ಯಾದಗಿರಿ ಜಿಲ್ಲೆಯ ಸುರಪುರ ಮೂಲದ ಭೀಮಣ್ಣ (65), ಶ್ರೀನಿವಾಸ (32) ಮತ್ತು ಶಶಿಧರ್ (33) ಎಂದು ಗುರುತಿಸಲಾಗಿದೆ.

 

ಅಪಘಾತ ನಡೆದ ತಕ್ಷಣ ಸ್ಥಳೀಯರು ಹಾಗೂ ರಸ್ತೆ ಮೂಲಕ ಸಂಚರಿಸುತ್ತಿದ್ದ ಪ್ರಯಾಣಿಕರು ರಕ್ಷಣಾ ಕಾರ್ಯಕ್ಕೆ ಧಾವಿಸಿ ಗಾಯಾಳುಗಳಿಗೆ ನೆರವಾದರು. ಬಳಿಕ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ವೈದ್ಯಕೀಯ ಮೂಲಗಳ ಪ್ರಕಾರ ಗಾಯಾಳುಗಳ ಸ್ಥಿತಿ ಸ್ಥಿರವಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 

ಅಪಘಾತದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚಿಸಿದ್ದಾರೆ. ಮಳೆಗಾಲದ ಕಾರಣ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ದಟ್ಟ ಮಂಜು, ಜಾರುವ ರಸ್ತೆ ಹಾಗೂ ಕಡಿಮೆ ಗೋಚರತೆ ಇರುವುದರಿಂದ ಚಾಲಕರು ವೇಗ ನಿಯಂತ್ರಿಸಿ ಸುರಕ್ಷಿತವಾಗಿ ವಾಹನ ಚಲಾಯಿಸುವಂತೆ ಮನವಿ ಮಾಡಲಾಗಿದೆ.