10 July 2026 |

ಮಹಾರಾಷ್ಟ್ರದಲ್ಲಿ ಅಡಿಕೆ ಸಾಗಾಟಕ್ಕೆ ಎದುರಾಗಿರುವ ಅಡಚಣೆ ನಿವಾರಣೆಗೆ ಕೇಂದ್ರ ಸಚಿವರ ನಿಯೋಗ; ಸಕಾರಾತ್ಮಕ ಸ್ಪಂದನೆ ನೀಡಿದ ಮಹಾರಾಷ್ಟ್ರ ಸಿಎಂ

  • 09 Jul 2026 02:09:08 PM

ನವದೆಹಲಿ/ಮಂಗಳೂರು: ಮಹಾರಾಷ್ಟ್ರದಲ್ಲಿ ಅಡಿಕೆ ಸಾಗಾಟದ ವಾಹನಗಳ ಸಂಚಾರಕ್ಕೆ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಹಾಗೂ ಅಡಿಕೆ ಬೆಳೆಗಾರರು ಮತ್ತು ವರ್ತಕರ ಹಿತರಕ್ಷಣೆಯ ಉದ್ದೇಶದಿಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ನೇತೃತ್ವದ ನಿಯೋಗವು ನಿನ್ನೆ ಸಂಜೆ ನವದೆಹಲಿಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿತು.

 

ಸಭೆಯಲ್ಲಿ ಮಹಾರಾಷ್ಟ್ರದಲ್ಲಿ ನಿಯಮಬದ್ಧವಾಗಿ ಮತ್ತು ಕಾನೂನುಬದ್ಧವಾಗಿ ಸಾಗಣೆಯಾಗುತ್ತಿರುವ ಅಡಿಕೆ ಸರಕು ವಾಹನಗಳ ಸಂಚಾರಕ್ಕೆ ಎದುರಾಗುತ್ತಿರುವ ಅಡಚಣೆಗಳ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು. ಅಡಿಕೆ ಸಾಗಾಟಕ್ಕೆ ಯಾವುದೇ ಅನಗತ್ಯ ತೊಂದರೆ ಉಂಟಾಗದಂತೆ ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸುವಂತೆ ನಿಯೋಗವು ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿತು.

 

ನಿಯೋಗದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು ಎಂದು ತಿಳಿದುಬಂದಿದೆ.

 

ಈ ನಿಯೋಗದಲ್ಲಿ ಸಂಸದರಾದ ಕ್ಯಾ. ಬೃಜೇಶ್ ಚೌಟ, ಬಿ. ವೈ. ರಾಘವೇಂದ್ರ ಹಾಗೂ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ಆರಗ ಜ್ಞಾನೇಂದ್ರ ಮತ್ತು ರಾಜೇಶ್ ನಾಯ್ಕ್ , ಜೊತೆಗೆ ಕ್ಯಾಂಪ್ಕೋ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಇತರ ಪ್ರಮುಖ ಅಡಿಕೆ ಸಹಕಾರಿ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.