ಮಂಗಳೂರು: ಸೈಬರ್ ವಂಚನೆಗಳ ಬಗ್ಗೆ ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದ್ದರೂ, ಆನ್‌ಲೈನ್ ಹೂಡಿಕೆ ಆಮಿಷಗಳಿಗೆ ಬಲಿಯಾಗಿ ಹಣ ಕಳೆದುಕೊಳ್ಳುವ ಘಟನೆಗಳು ಮುಂದುವರಿದಿವೆ. ಇದೇ ರೀತಿಯ ಘಟನೆಯಲ್ಲಿ ವಾಟ್ಸಾಪ್ ಮೂಲಕ ಬಂದ ಸಂದೇಶವನ್ನು ನಂಬಿದ 68 ವರ್ಷದ ವ್ಯಕ್ತಿಯೊಬ್ಬರು ₹10.15 ಲಕ್ಷ ಕಳೆದುಕೊಂಡಿದ್ದು, ಈ ಸಂಬಂಧ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಜೂನ್ 25ರಿಂದ ಜುಲೈ 9ರವರೆಗೆ ಅಪರಿಚಿತ ವ್ಯಕ್ತಿಗಳು ಹೂಡಿಕೆ ಮೂಲಕ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ನಂಬಿಸಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸುವಂತೆ ಸೂಚಿಸಿದ್ದರು. ಅವರ ಮಾತುಗಳನ್ನು ನಂಬಿದ ವೃದ್ಧರು ಹಂತ ಹಂತವಾಗಿ ಒಟ್ಟು ₹10,15,000 ಹಣವನ್ನು ಬೇರೆ ಬೇರೆ ಖಾತೆಗಳಿಗೆ ಜಮಾ ಮಾಡಿದ್ದಾರೆ.
ವಂಚಕರು ನೀಡಿದ್ದ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಹೂಡಿಕೆ ಮೊತ್ತವು ಹೆಚ್ಚಾಗಿ ₹34,10,149 ಆಗಿರುವಂತೆ ತೋರಿಸಲಾಗಿತ್ತು. ಬಳಿಕ ಆ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ, ಇನ್ನಷ್ಟು ಹಣ ಹೂಡಿಕೆ ಮಾಡಿದರೆ ಮಾತ್ರ ಮೊತ್ತವನ್ನು ವಾಪಸ್ ಪಡೆಯಬಹುದು ಎಂದು ಅಪರಿಚಿತರು ತಿಳಿಸಿದ್ದರು.
ಈ ಬೆಳವಣಿಗೆಯಿಂದ ಅನುಮಾನಗೊಂಡ ವೃದ್ಧರು ವಿಷಯವನ್ನು ತಮ್ಮ ಮಗಳ ಗಮನಕ್ಕೆ ತಂದಿದ್ದಾರೆ. ಪರಿಶೀಲಿಸಿದಾಗ ತಾವು ಸೈಬರ್ ವಂಚಕರ ಬಲೆಗೆ ಬಿದ್ದಿರುವುದು ಗೊತ್ತಾಗಿದೆ. ವಂಚಕರು ಮೋಸದಿಂದ ₹10.15 ಲಕ್ಷ ಹಣವನ್ನು ಪಡೆದುಕೊಂಡಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಮನವಿ ಮಾಡಿದ್ದಾರೆ.





