12 July 2026 |

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಗೆ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಆಕ್ಷೇಪ

  • 12 Jul 2026 01:03:37 PM

ಮಂಗಳೂರು: ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನಲ್ಲಿ ಕಂಬಳ ಸ್ಪರ್ಧೆ ನಡೆಸುವ ಪ್ರಸ್ತಾಪಕ್ಕೆ ವಿರೋಧದ ಸ್ವರಗಳು ಹೆಚ್ಚಾಗುತ್ತಿವೆ. ಈ ಹಿಂದೆ ಮೈಸೂರು ರಾಜವಂಶದ ವಂಶಸ್ಥ ಹಾಗೂ ಸಂಸದ ಯದುವೀರ್ ಒಡೆಯರ್ ತಮ್ಮ ಅಸಮ್ಮತಿ ವ್ಯಕ್ತಪಡಿಸಿದ್ದರೆ, ಇದೀಗ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕೂಡ ಈ ವಿಷಯದಲ್ಲಿ ತಮ್ಮ ವಿರೋಧವನ್ನು ದಾಖಲಿಸಿದ್ದಾರೆ.

 

ಈ ಕುರಿತು ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಮೈಸೂರು ದಸರಾ ತನ್ನದೇ ಆದ ವೈಭವ, ಪರಂಪರೆ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯಗಳಿಂದ ಗುರುತಿಸಿಕೊಂಡಿರುವ ಉತ್ಸವವಾಗಿದ್ದು, ಅದರಲ್ಲಿ ಕಂಬಳವನ್ನು ಸೇರಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಹಲವು ವರ್ಷಗಳಿಂದ ನಡೆದುಬರುತ್ತಿರುವ ದಸರಾ ಸಂಪ್ರದಾಯಕ್ಕೆ ಯಾವುದೇ ರೀತಿಯ ಧಕ್ಕೆ ಉಂಟಾಗುವಂತ ಪ್ರಯತ್ನಗಳು ನಡೆಯಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

 

ಕರಾವಳಿ ಭಾಗದ ಸಂಸ್ಕೃತಿ, ನಂಬಿಕೆ ಮತ್ತು ಪರಂಪರೆಯ ಪ್ರತೀಕವಾಗಿರುವ ಕಂಬಳವು ಆ ಪ್ರದೇಶದ ಭೌಗೋಳಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯೊಂದಿಗೆ ನಿಕಟವಾಗಿ ಸಂಬಂಧ ಹೊಂದಿದೆ. ಅದನ್ನು ಬೇರೆ ಪ್ರದೇಶಕ್ಕೆ ಸ್ಥಳಾಂತರಿಸುವುದರಿಂದ ಅದರ ಮೂಲ ಪರಂಪರೆ ಮತ್ತು ಪಾವಿತ್ರ್ಯತೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

 

ಕರಾವಳಿ ಪ್ರದೇಶದ ಹಸಿರು ಪರಿಸರ, ನೀರಿನ ಸಂಪತ್ತು ಹಾಗೂ ಪ್ರಕೃತಿಯ ಸೊಬಗಿನ ಮಧ್ಯೆ ಕಂಬಳವನ್ನು ನೋಡುವ ಅನುಭವವೇ ವಿಶಿಷ್ಟವಾಗಿರುತ್ತದೆ. ಆದ್ದರಿಂದ ಮೈಸೂರು ಮತ್ತು ಕರಾವಳಿ ಭಾಗದ ಜನರ ಸಾಂಸ್ಕೃತಿಕ ಭಾವನೆಗಳಿಗೆ ನೋವುಂಟು ಮಾಡುವ ನಿರ್ಧಾರಗಳನ್ನು ಕೈಗೊಳ್ಳುವುದು ಸೂಕ್ತವಲ್ಲ ಎಂದು ಅವರು ಹೇಳಿದ್ದಾರೆ.

 

ಇನ್ನೊಂದೆಡೆ, ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ದಸರಾ ಸಂದರ್ಭದಲ್ಲಿ ಕಂಬಳ ಆಯೋಜಿಸುವುದು ಸರಿಯಾದ ಕ್ರಮವಲ್ಲ ಎಂದು ಅಭಿಪ್ರಾಯಪಟ್ಟರು. ಸರ್ಕಾರ ಹಠಮಾರಿ ನಿಲುವು ಬಿಟ್ಟು ಮೈಸೂರಿನ ಜನರ ಸಾಂಸ್ಕೃತಿಕ ಭಾವನೆಗಳಿಗೆ ಗೌರವ ನೀಡಬೇಕು ಎಂದು ಅವರು ಒತ್ತಾಯಿಸಿದರು.

 

ಕರಾವಳಿ ಭಾಗದ ಹೆಮ್ಮೆಯ ಪರಂಪರೆಯಾದ ಕಂಬಳಕ್ಕೆ ದೀರ್ಘ ಇತಿಹಾಸ ಮತ್ತು ವಿಶಿಷ್ಟ ಸಾಂಸ್ಕೃತಿಕ ಮೌಲ್ಯಗಳಿವೆ. ಅದನ್ನು ಕರಾವಳಿ ಜಿಲ್ಲೆಗಳಲ್ಲೇ ಭವ್ಯವಾಗಿ ನಡೆಸಲು ಎಲ್ಲ ರೀತಿಯ ಬೆಂಬಲ ನೀಡಲು ಸಿದ್ಧವಿದ್ದೇವೆ. ಆದರೆ ಕರಾವಳಿಯ ಸಂಪ್ರದಾಯವನ್ನು ಮೈಸೂರು ದಸರಾ ಸಂಸ್ಕೃತಿಯೊಂದಿಗೆ ಬೆರೆಸುವ ಪ್ರಯತ್ನ ಮಾಡಬಾರದು ಎಂದು ವಿಜಯೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.