ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿದೆ. ಎಸ್‌ಐಟಿ ಎಸ್‌ಪಿ ಜಿತೇಂದ್ರ ಕುಮಾರ್ ದಯಾಮಾ ನೇತೃತ್ವದ ತಂಡ ಇದುವರೆಗೆ ನಡೆಸಿರುವ ತನಿಖೆಯ ಸಮಗ್ರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಈ ಪ್ರಕರಣವು 2025ರ ಜುಲೈನಲ್ಲಿ ಚಿನ್ನಯ್ಯ ಅವರು ತಲೆಬುರುಡೆಯೊಂದಿಗೆ ನ್ಯಾಯಾಲಯಕ್ಕೆ ಹಾಜರಾಗಿ, ಧರ್ಮಸ್ಥಳ ಗ್ರಾಮದಲ್ಲಿ ಹಲವು ಸ್ಥಳಗಳಲ್ಲಿ ಅಕ್ರಮವಾಗಿ ಮೃತದೇಹಗಳನ್ನು ಹೂಳಲಾಗಿದೆ ಎಂದು ಹೇಳಿಕೆ ನೀಡಿದ ಬಳಿಕ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು.
ಬಳಿಕ ರಾಜ್ಯ ಸರ್ಕಾರ ಎಸ್‌ಐಟಿಯನ್ನು ರಚಿಸಿ ಪ್ರಕರಣದ ತನಿಖೆಗೆ ಆದೇಶಿಸಿತ್ತು. ತನಿಖೆಯ ವೇಳೆ ಧರ್ಮಸ್ಥಳದ ವಿವಿಧ ಸ್ಥಳಗಳಲ್ಲಿ ಅಗೆತ ನಡೆಸಲಾಗಿದ್ದು, ಪತ್ತೆಯಾದ ಮಾನವ ಎಲುಬುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಪರೀಕ್ಷೆಗೆ ಕಳುಹಿಸಲಾಗಿತ್ತು. ಜೊತೆಗೆ ಪಂಚಾಯಿತಿ, ಪೊಲೀಸ್ ಠಾಣೆ ಹಾಗೂ ಆಸ್ಪತ್ರೆಯ ದಾಖಲೆಗಳನ್ನೂ ಪರಿಶೀಲಿಸಲಾಗಿದೆ.
ಇದೀಗ ಈ ಎಲ್ಲ ತನಿಖೆಯ ವಿವರಗಳನ್ನು ಒಳಗೊಂಡ ವರದಿಯನ್ನು ಎಸ್‌ಐಟಿ ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆ ಇದೆ.





