ಬೆಳ್ತಂಗಡಿ:ಅಂಗನವಾಡಿ ಕೇಂದ್ರದಲ್ಲಿ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕಿಗೆ ವಿಷಕಾರಿ ಹಾವು ಕಚ್ಚಿದ ಪರಿಣಾಮ ಗಂಭೀರ ಅಸ್ವಸ್ಥಗೊಂಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಸೌತಡ್ಕ ಅಂಗನವಾಡಿ ಕೇಂದ್ರದಲ್ಲಿ ಜುಲೈ 14ರಂದು ನಡೆದಿದೆ.
ಗಾಯಗೊಂಡ ಬಾಲಕಿಯನ್ನು ಮಲ್ಲಿಗೆಮಜಲು ಮಸೀದಿಯ ಅಧ್ಯಕ್ಷ ಸಿಯಾಬ್ ಅವರ ಪುತ್ರಿ ಪಾತಿಮತ್ ಸಹದಿಯಾ (4) ಎಂದು ಗುರುತಿಸಲಾಗಿದೆ. ಸದ್ಯ ಆಕೆ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ನಿಗಾ ವಹಿಸಿದ್ದಾರೆ.
ಮಾಹಿತಿಯ ಪ್ರಕಾರ, ಪಾತಿಮತ್ ಸಹದಿಯಾ ಎಂದಿನಂತೆ ಅಂಗನವಾಡಿಗೆ ತೆರಳಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದಳು. ಈ ವೇಳೆ ತರಗತಿ ಕೊಠಡಿಯ ಒಂದು ಮೂಲೆಯಲ್ಲಿ ಇರಿಸಲಾಗಿದ್ದ ಪ್ಲಾಸ್ಟಿಕ್ ಆಟಿಕೆಗಳು ಹಾಗೂ ಇತರ ಸಾಮಗ್ರಿಗಳ ನಡುವೆ ಹಾವು ಅಡಗಿ ಕುಳಿತಿತ್ತು ಎನ್ನಲಾಗಿದೆ. ಆಟಿಕೆಗಳನ್ನು ತೆಗೆದುಕೊಳ್ಳಲು ಮುಂದಾದ ಸಂದರ್ಭದಲ್ಲಿ ಹಾವು ಬಾಲಕಿಗೆ ಕಚ್ಚಿರುವ ಶಂಕೆ ವ್ಯಕ್ತವಾಗಿದೆ.
ಕಡಿತವಾದ ತಕ್ಷಣ ಏನಾಗಿದೆ ಎಂಬುದು ಮಗುವಿಗೆ ತಿಳಿದಿರಲಿಲ್ಲ. ಆದರೆ ನೋವಿನಿಂದ ಆಕೆ ಜೋರಾಗಿ ಅಳಲು ಆರಂಭಿಸಿದ್ದರಿಂದ ಅಂಗನವಾಡಿ ಸಹಾಯಕಿ ತಕ್ಷಣ ಪರಿಸ್ಥಿತಿಯನ್ನು ಅರಿತು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಸಂಭವಿಸಿದ ವೇಳೆ ಅಂಗನವಾಡಿ ಶಿಕ್ಷಕಿ ಬಿ.ಎಲ್.ಒ. ಕರ್ತವ್ಯದ ನಿಮಿತ್ತ ಹೊರಗಿದ್ದ ಕಾರಣ ಕೇಂದ್ರದಲ್ಲಿ ಸಹಾಯಕಿ ಮಾತ್ರ ಇದ್ದರು ಎಂದು ತಿಳಿದುಬಂದಿದೆ.
ಬಾಲಕಿಯನ್ನು ತಕ್ಷಣವೇ ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ವೈದ್ಯರ ಸಲಹೆಯಂತೆ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ರವಾನಿಸಲಾಯಿತು. ಸದ್ಯ ಆಕೆ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿತಿಯ ಮೇಲೆ ವೈದ್ಯರು ನಿಗಾ ವಹಿಸಿದ್ದಾರೆ.
ಮೊದಲ ಹಂತದಲ್ಲಿ ವೈದ್ಯರು ಇದನ್ನು ಜೇನುಹುಳದ ಕಡಿತವಾಗಿರಬಹುದು ಎಂದು ಶಂಕಿಸಿದ್ದರು. ಆದರೆ ಘಟನೆಯ ವೇಳೆ ಇದ್ದ ಮತ್ತೊಬ್ಬ ಮಗು ದೊಡ್ಡ ಹಾವು ಕಂಡಿರುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಸ್ಥಳೀಯರು ಅಂಗನವಾಡಿ ಆವರಣದಲ್ಲಿ ಹುಡುಕಾಟ ನಡೆಸಿದರು. ಈ ವೇಳೆ ಕಟ್ಟಲಕ್ಕರಿ ಹಾವು ಪತ್ತೆಯಾಗಿದ್ದು, ಬಳಿಕ ಸಾರ್ವಜನಿಕರು ಅದನ್ನು ಹೊಡೆದು ಕೊಂದಿದ್ದಾರೆ ಎನ್ನಲಾಗಿದೆ.
ಅಂಗನವಾಡಿಯ ಒಂದು ಕಿಟಕಿ ತೆರೆದಿದ್ದ ಕಾರಣ ತೇವಾಂಶದ ಹಿನ್ನೆಲೆಯಲ್ಲಿ ಹಾವು ಒಳನುಗ್ಗಿರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ, ಗೊಣಿಯ ಕೆಳಭಾಗದಲ್ಲಿ ಅವಿತಿದ್ದ ಹಾವನ್ನು ಮಕ್ಕಳು ಎಳೆದ ಸಂದರ್ಭ ಈ ಘಟನೆ ನಡೆದಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ.





