ಅರಂತೋಡು: ಮಂಗಳೂರಿನಿಂದ ಮೈಸೂರಿಗೆ ಗೇರುಬೀಜ ಸಾಗಿಸುತ್ತಿದ್ದ ಲಾರಿಯೊಂದು ಸಂಪಾಜೆ ಚೌಕಿ ಸಮೀಪ ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶನಿವಾರ ರಾತ್ರಿ ನಡೆದಿದೆ.
ಅಪಘಾತದ ಪರಿಣಾಮ ಹೆದ್ದಾರಿಯಲ್ಲಿ ಕೆಲ ಗಂಟೆಗಳ ಕಾಲ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸ್ಥಳೀಯರು ಸ್ಥಳಕ್ಕೆ ಧಾವಿಸಿ ಕ್ರೇನ್ ಸಹಾಯದಿಂದ ಪಲ್ಟಿಯಾಗಿದ್ದ ಲಾರಿಯನ್ನು ತೆರವುಗೊಳಿಸಿದ ಬಳಿಕ ಸಂಚಾರಕ್ಕೆ ಮತ್ತೆ ಅವಕಾಶ ಕಲ್ಪಿಸಲಾಯಿತು.
ಅಪಘಾತದಲ್ಲಿ ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಗಂಭೀರ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.





