10 August 2026 |

ಆಟವಾಡಿ ಮನೆಗೆ ತೆರಳುತ್ತಿದ್ದ ಬಾಲಕರನ್ನು ಕಾರಿನಲ್ಲಿ ಕರೆದೊಯ್ಯಲು ಅಪರಿಚಿತರ ಯತ್ನ

  • 10 Aug 2026 10:44:57 AM

ಉಪ್ಪಿನಂಗಡಿ: ಆಟವಾಡಿ ಮನೆಗೆ ಹಿಂದಿರುಗುತ್ತಿದ್ದ ಇಬ್ಬರು ಬಾಲಕರನ್ನು ಕಾರಿನಲ್ಲಿ ಕರೆದೊಯ್ಯಲು ಅಪರಿಚಿತರ ತಂಡವೊಂದು ಒತ್ತಾಯಿಸಿ, ಬಳಿಕ ಅವರನ್ನು ಹಿಂಬಾಲಿಸಿದ ಘಟನೆ ಹಿರೆಬಂಡಾಡಿ ಗ್ರಾಮದ ಅಡ್ಯಲ್‌ ಎಂಬಲ್ಲಿ ನಡೆದಿದೆ.

 

ಶನಿವಾರ ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಹಿರೆಬಂಡಾಡಿ ಗ್ರಾಮದ ಮುಡಿಪು ಹಾಗೂ ಕಡೋಂಟು ಭಾಗದ ಕೆಲವು ಬಾಲಕರು ಸಮೀಪದ ಶಾಲಾ ಮೈದಾನದಲ್ಲಿ ಆಟವಾಡಲು ತೆರಳಿದ್ದರು. ಆಟ ಮುಗಿಸಿ ಇಬ್ಬರು ಬಾಲಕರು ಮನೆಗೆ ವಾಪಸ್‌ ಆಗುತ್ತಿದ್ದಾಗ ಅಡ್ಯಲ್‌ ಬಳಿ ರಸ್ತೆ ಬದಿಯಲ್ಲಿ ಕಾರೊಂದು ನಿಂತಿರುವುದು ಕಂಡುಬಂದಿದೆ. 

 

ಕಾರಿನಲ್ಲಿದ್ದ 4-5 ಮಂದಿ ಬಾಲಕರನ್ನು ತಮ್ಮ ವಾಹನದಲ್ಲಿ ಮನೆಗೆ ತಲುಪಿಸುವುದಾಗಿ ಹೇಳಿ ತಮ್ಮೊಂದಿಗೆ ಬರುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.

 

ಆದರೆ ಬಾಲಕರು ಕಾರಿನಲ್ಲಿ ಬರುವುದಿಲ್ಲ ಎಂದು ನಿರಾಕರಿಸಿದಾಗ, ತಂಡದಲ್ಲಿದ್ದ ಇಬ್ಬರು ಅವರನ್ನು ಹಿಂಬಾಲಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದರಿಂದ ಆತಂಕಗೊಂಡ ಬಾಲಕರು ಓಡಿ ಹೋಗಿ ಅವರಿಂದ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ.

 

ಕಾರಿನಲ್ಲಿ ಬಂದಿದ್ದ ವ್ಯಕ್ತಿಗಳು ಸ್ಥಳದಲ್ಲಿ ಸಾಕಷ್ಟು ಸಮಯ ವಾಹನ ನಿಲ್ಲಿಸಿಕೊಂಡು ಸಂಶಯಾಸ್ಪದವಾಗಿ ವರ್ತಿಸುತ್ತಿದ್ದರು ಎಂದು ಕೆಲ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಘಟನೆಗೆ ಗಂಭೀರವಾಗಿ ಸ್ಪಂದಿಸಿದ ಬಾಲಕರ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

 

ಘಟನೆಗೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.