10 August 2026 |

ಹೋಟೆಲ್‌ ಅಡುಗೆ ಮನೆಯಲ್ಲೂ ಕ್ಯಾಮೆರಾ: ಯು.ಟಿ. ಖಾದರ್ ಎಚ್ಚರಿಕೆ

  • 10 Aug 2026 01:41:41 PM

ಬೆಂಗಳೂರು: ಹೋಟೆಲ್‌ಗಳಲ್ಲಿ ಆಹಾರ ತಯಾರಿಸುವ ಪ್ರಕ್ರಿಯೆ ಮತ್ತು ಅಡುಗೆ ಮನೆಯ ಸ್ವಚ್ಛತೆ ಗ್ರಾಹಕರಿಗೂ ತಿಳಿಯುವಂತಾಗಲು, ಮುಂದಿನ ದಿನಗಳಲ್ಲಿ ಅಡುಗೆ ಮನೆಗಳಲ್ಲೂ ಕ್ಯಾಮೆರಾ ಅಳವಡಿಸುವ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

 

ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಚಿವರು, ಹೋಟೆಲ್‌ಗಳಲ್ಲಿ ಆಹಾರವನ್ನು ಯಾವ ರೀತಿಯಲ್ಲಿ ತಯಾರಿಸಲಾಗುತ್ತಿದೆ ಹಾಗೂ ಸ್ವಚ್ಛತಾ ಕ್ರಮಗಳನ್ನು ಸರಿಯಾಗಿ ಪಾಲಿಸಲಾಗುತ್ತಿದೆಯೇ ಎಂಬುದನ್ನು ಗ್ರಾಹಕರು ತಿಳಿದುಕೊಳ್ಳುವ ಅವಕಾಶ ಇರಬೇಕು. ಈ ಉದ್ದೇಶದಿಂದ ಅಗತ್ಯ ಕಾನೂನು ಹಾಗೂ ಮಾರ್ಗಸೂಚಿಗಳನ್ನು ರೂಪಿಸುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.

 

ಗ್ರಾಹಕರಿಗೆ ಗುಣಮಟ್ಟದ ಮತ್ತು ಸುರಕ್ಷಿತ ಆಹಾರ ಒದಗಿಸುವುದು ಹೋಟೆಲ್‌ಗಳ ಪ್ರಮುಖ ಜವಾಬ್ದಾರಿಯಾಗಿದೆ. ಆಹಾರದ ಗುಣಮಟ್ಟದಲ್ಲಿ ಯಾವುದೇ ರೀತಿಯ ಲೋಪ ಕಂಡುಬಂದರೆ ಸಂಬಂಧಪಟ್ಟ ಹೋಟೆಲ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಖಾದರ್ ಸ್ಪಷ್ಟಪಡಿಸಿದರು.

 

ಈಗಾಗಲೇ ಬೆಂಗಳೂರಿನ ಹಲವು ಪ್ರಮುಖ ಹೋಟೆಲ್‌ಗಳಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದ್ದು, ವಿವಿಧ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪರೀಕ್ಷಾ ವರದಿ ಬಂದ ನಂತರ ನಿಯಮ ಉಲ್ಲಂಘಿಸಿರುವ ಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

 

ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸದ ಹೋಟೆಲ್‌ಗಳಿಗೆ ಮೊದಲಿಗೆ ನೋಟಿಸ್ ನೀಡಲಾಗುತ್ತದೆ. ನೋಟಿಸ್ ಬಳಿಕವೂ ನಿಯಮ ಉಲ್ಲಂಘನೆ ಮುಂದುವರಿಸಿದರೆ ಅಂತಹ ಹೋಟೆಲ್‌ಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಂಡು ಬಂದ್ ಮಾಡಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.