10 August 2026 |

ಮಂಗಳೂರು: ರಸ್ತೆ ಗುಂಡಿಯಲ್ಲೇ ‘ಕೆರೆ-ದಂಡೆ’ ಆಟ; ಯುವಕರ ವಿಭಿನ್ನ ಪ್ರತಿಭಟನೆ

  • 10 Aug 2026 10:52:52 AM

ಮಂಗಳೂರು: ರಸ್ತೆ ಗುಂಡಿಗಳಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತರಲು ಸ್ಥಳೀಯ ಯುವಕರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. 

 

ಮಂಗಳೂರು–ಕೇರಳ ರಸ್ತೆಯೊಂದರಲ್ಲಿ ಮಳೆಯಿಂದಾಗಿ ಬೃಹತ್ ಗುಂಡಿಯಲ್ಲಿ ಕೆಸರು ನೀರು ತುಂಬಿಕೊಂಡಿದ್ದು, ರಸ್ತೆಯೇ ಕೆರೆಯಂತಾಗಿರುವುದನ್ನು ಖಂಡಿಸಿ ಯುವಕರು ವ್ಯಂಗ್ಯಾತ್ಮಕವಾಗಿ ‘ಕೆರೆ-ದಂಡೆ’ ಆಟ ಆಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಕೆಸರು ನೀರಿನಿಂದ ತುಂಬಿದ್ದ ಗುಂಡಿಯ ಸುತ್ತ ಸೇರಿದ್ದ ಯುವಕರು, ‘ಕೆರೆ’ ಎಂದು ಹೇಳಿದಾಗ ಗುಂಡಿಯ ನೀರಿಗೆ ಇಳಿದು, ‘ದಂಡೆ’ ಎಂದಾಗ ಹೊರಗೆ ಬರುವ ರೀತಿಯಲ್ಲಿ ಆಟವಾಡಿದ್ದಾರೆ. ಈ ಮೂಲಕ ರಸ್ತೆಯ ದುಸ್ಥಿತಿಯನ್ನು ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ.

 

ಯುವಕರ ಈ ವಿಶಿಷ್ಟ ಪ್ರತಿಭಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಸ್ತೆಯ ಗುಂಡಿಗಳಿಂದ ಪ್ರತಿನಿತ್ಯ ಸಂಚಾರ ನಡೆಸುವ ವಾಹನ ಸವಾರರು ಮತ್ತು ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

 

ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ನಿಂತು ಅಪಾಯದ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆ ಕೂಡಲೇ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆ ಸಮಸ್ಯೆಯನ್ನು ಶೀಘ್ರ ಪರಿಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.