ಬೆಳ್ತಂಗಡಿ: ನೀರಚಿಲುಮೆ ತಿರುವಿನಲ್ಲಿ ಕೆಎಸ್ಸಾರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದು, ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಆಗಸ್ಟ್ 11ರ ಬೆಳಗ್ಗೆ ನಡೆದಿದೆ.
ಧರ್ಮಸ್ಥಳದಿಂದ ಉಜಿರೆ ಕಡೆಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಹಾಗೂ ಎದುರಿನಿಂದ ಬರುತ್ತಿದ್ದ ಬೈಕ್ ನಡುವೆ ನೀರಚಿಲುಮೆ ತಿರುವಿನಲ್ಲಿ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬಸ್‌ನ ಮುಂಭಾಗ ಹಾನಿಗೊಂಡಿದ್ದು, ಬೈಕ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಮೃತರನ್ನು ಮಡಂತ್ಯಾರು ಪಾರೆಂಕಿ ಪಂಗಳ ನಿವಾಸಿ ಸೋಮನಾಥ (27) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಬೈಕ್‌ನಲ್ಲಿದ್ದ ಸಹಸವಾರ ಭರತ್ ಬಳ್ಳಮಂಜ ಅವರಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸೋಮನಾಥ ಹಾಗೂ ಭರತ್ ಇಬ್ಬರೂ ಗಾರೆ ಕೆಲಸ ಮಾಡುತ್ತಿದ್ದರು. ಕೆಲಸದ ನಿಮಿತ್ತ ಧರ್ಮಸ್ಥಳಕ್ಕೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.





