ಮಂಗಳೂರು: ಅಪಘಾತ, ಗಂಭೀರ ಗಾಯ ಸೇರಿದಂತೆ ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ತಕ್ಷಣವೇ ಅಗತ್ಯ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ನಗರದ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ನಿರ್ಮಿಸಲಾಗುತ್ತಿರುವ ಕ್ರಿಟಿಕಲ್ ಕೇರ್ (ಟ್ರಾಮಾ ಕೇರ್) ಘಟಕ ಶೀಘ್ರದಲ್ಲೇ ಕಾರ್ಯಾರಂಭಿಸುವ ನಿರೀಕ್ಷೆಯಿದೆ.
ತೀವ್ರ ನಿಗಾ ಮತ್ತು ತುರ್ತು ಚಿಕಿತ್ಸೆಯ ಅಗತ್ಯವಿರುವ ರೋಗಿಗಳಿಗೆ ಒಂದೇ ಕಡೆ ಸಮಗ್ರ ವೈದ್ಯಕೀಯ ಸೇವೆ ದೊರೆಯುವಂತೆ ಈ ಘಟಕವನ್ನು ಆಧುನಿಕ ಸೌಲಭ್ಯಗಳೊಂದಿಗೆ ಸಿದ್ಧಪಡಿಸಲಾಗುತ್ತಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರು, ಉಸಿರಾಟದ ಸಮಸ್ಯೆ, ಹೃದಯ ಸಂಬಂಧಿ ತುರ್ತು ಪರಿಸ್ಥಿತಿ, ಸುಟ್ಟ ಗಾಯಗಳು ಸೇರಿದಂತೆ ವಿವಿಧ ಜೀವಾಪಾಯದ ಸ್ಥಿತಿಯಲ್ಲಿರುವವರಿಗೆ ಇದು ತ್ವರಿತ ಚಿಕಿತ್ಸೆ ನೀಡಲು ನೆರವಾಗಲಿದೆ. ಪ್ರಸ್ತುತ ವೆನ್ಲಾಕ್‌ನಲ್ಲಿ ಇಂತಹ ಚಿಕಿತ್ಸೆ ಲಭ್ಯವಿದ್ದರೂ, ಎಲ್ಲ ಸೌಲಭ್ಯಗಳನ್ನು ಒಂದೇ ಘಟಕದಲ್ಲಿ ಒಗ್ಗೂಡಿಸುವ ವ್ಯವಸ್ಥೆ ಇಲ್ಲ.
ಹೊಸ ಕ್ರಿಟಿಕಲ್ ಕೇರ್ ಘಟಕದ ನಿರ್ಮಾಣಕ್ಕೆ ಒಟ್ಟು ₹24 ಕೋಟಿ ವೆಚ್ಚವಾಗುತ್ತಿದೆ. ಇದರಲ್ಲಿ ಕೇಂದ್ರ ಸರಕಾರದ ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಹೆಲ್ತ್ ಇನ್‌ಫ್ರಾಸ್ಟ್ರಕ್ಚರ್ ಮಿಷನ್ (PM-ABHIM) ಯೋಜನೆಯಡಿ ₹16.63 ಕೋಟಿ ಹಾಗೂ ರಾಜ್ಯ ಸರಕಾರದಿಂದ ₹7.37 ಕೋಟಿ ಅನುದಾನ ಒದಗಿಸಲಾಗಿದೆ.
ವೆನ್ಲಾಕ್ ಆಸ್ಪತ್ರೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಷ್ಟೇ ಅಲ್ಲದೆ, ರಾಜ್ಯದ ವಿವಿಧ ಭಾಗಗಳು ಹಾಗೂ ನೆರೆಯ ರಾಜ್ಯಗಳಿಂದಲೂ ರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಕ್ರಿಟಿಕಲ್ ಕೇರ್ ವಿಭಾಗ ಸ್ಥಾಪಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇತ್ತು.
ಸಾರ್ವಜನಿಕರ ಬೇಡಿಕೆಯನ್ನು ಪರಿಗಣಿಸಿ ವೆನ್ಲಾಕ್ ಆಸ್ಪತ್ರೆ ಆಡಳಿತವು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಬಳಿಕ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ದೊರೆತಿದ್ದು, ಅತ್ಯಾಧುನಿಕ ಕ್ರಿಟಿಕಲ್ ಕೇರ್ ಘಟಕ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.
ಕಾಮಗಾರಿ ಈಗಾಗಲೇ ಆರಂಭಗೊಂಡಿದ್ದು, ವೇಗವಾಗಿ ಪೂರ್ಣಗೊಳಿಸುವ ಪ್ರಯತ್ನ ನಡೆಯುತ್ತಿದೆ. ಎಲ್ಲವೂ ಯೋಜನೆಯಂತೆ ನಡೆದರೆ ಮುಂದಿನ ಮೂರರಿಂದ ನಾಲ್ಕು ತಿಂಗಳೊಳಗೆ ಘಟಕವನ್ನು ಸಾರ್ವಜನಿಕರ ಸೇವೆಗೆ ತೆರೆಯುವ ಸಾಧ್ಯತೆ ಇದೆ.





