ಬಂಟ್ವಾಳ: ಕರಿಯಂಗಳ ಗ್ರಾಮದ ತಂತ್ರಿಬೆಟ್ಟು ಪ್ರದೇಶದಲ್ಲಿ ಆಗಸ್ಟ್ 17ರಂದು ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸಮೀಪ 38 ವರ್ಷದ ಯುವಕನ ಮೃತದೇಹ ಪತ್ತೆಯಾಗಿದೆ. ವಿದ್ಯುತ್ ಪ್ರವಹಿಸಿ ಮೃತಪಟ್ಟಿರುವ ಸಾಧ್ಯತೆ ವ್ಯಕ್ತವಾಗಿದ್ದು, ಪ್ರಯೋಗಾಲಯದ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ಸ್ಪಷ್ಟವಾಗಲಿದೆ.
ಮೃತರನ್ನು ತಂತ್ರಿಬೆಟ್ಟು ನಿವಾಸಿ ಹಾಗೂ ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದ ಹರೀಶ್ ಟಿ. (38) ಎಂದು ಗುರುತಿಸಲಾಗಿದೆ. ಅವರು ಅವಿವಾಹಿತರಾಗಿದ್ದರು.
ಆಗಸ್ಟ್ 16ರಂದು ಎಂದಿನಂತೆ ಕೆಲಸ ಮುಗಿಸಿ ರಾತ್ರಿ ಸುಮಾರು 8 ಗಂಟೆಗೆ ಮನೆಗೆ ಹಿಂದಿರುಗಿದ್ದ ಹರೀಶ್ ಊಟ ಮಾಡಿ ಮಲಗಿದ್ದರು. ಮರುದಿನ ಬೆಳಗ್ಗೆ ಮನೆಯವರು ಎದ್ದು ನೋಡಿದಾಗ ಅವರು ಮನೆಯಲ್ಲಿ ಕಾಣಿಸಲಿಲ್ಲ. ಈ ವೇಳೆ ಬೆಳಗ್ಗೆ ಸುಮಾರು 7.30ಕ್ಕೆ ಪುರುಷೋತ್ತಮ ಎಂಬವರು ಕುಟುಂಬದವರಿಗೆ ಕರೆ ಮಾಡಿ, ತಂತ್ರಿಬೆಟ್ಟು ಟ್ರಾನ್ಸ್‌ಫಾರ್ಮರ್ ಬಳಿ ದೊಡ್ಡ ಶಬ್ದ ಕೇಳಿಸಿದ್ದು, ವಿದ್ಯುತ್ ಸಮಸ್ಯೆ ಉಂಟಾಗಿದೆ ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ತೆರಳಿದಾಗ ಹರೀಶ್ ಅವರ ಬೈಕ್ ಕಂಡುಬಂದಿದ್ದು, ಅವರು ಟ್ರಾನ್ಸ್‌ಫಾರ್ಮರ್ ಬಳಿ ಬಿದ್ದಿರುವುದಾಗಿ ಮಾಹಿತಿ ನೀಡಿದ್ದಾರೆ.
ತಕ್ಷಣ ಕುಟುಂಬಸ್ಥರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಹರೀಶ್ ಟ್ರಾನ್ಸ್‌ಫಾರ್ಮರ್‌ನ ಕೆಳಭಾಗದಲ್ಲಿ ಬಿದ್ದಿರುವುದು ಕಂಡುಬಂದಿದೆ. ಪರಿಶೀಲನೆಯ ವೇಳೆ ಅವರು ಮೃತಪಟ್ಟಿರುವುದು ದೃಢಪಟ್ಟಿದೆ.
ಆಗಸ್ಟ್ 17ರ ಬೆಳಗ್ಗೆ 6.30ರಿಂದ 7.30ರ ನಡುವಿನ ಅವಧಿಯಲ್ಲಿ ಹರೀಶ್ ಟ್ರಾನ್ಸ್‌ಫಾರ್ಮರ್ ಬಳಿ ತೆರಳಿರಬಹುದು. ಈ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಅವರು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಆದರೆ ಅವರು ಟ್ರಾನ್ಸ್‌ಫಾರ್ಮರ್ ಬಳಿ ಹೋಗಿದ್ದಕ್ಕೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.
ಮೃತರ ಸಹೋದರ ದಿನೇಶ್ ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





