ನಗರದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಸಮಸ್ಯೆಯತ್ತ ಆಡಳಿತದ ಗಮನ ಸೆಳೆಯಲು ಖಂಡ್ವಾದಲ್ಲಿ ವಿನೂತನ ರೀತಿಯ ಪ್ರತಿಭಟನೆ ನಡೆದಿದೆ. ವ್ಯಕ್ತಿಯೊಬ್ಬರು ನಾಯಿ ವೇಷ ಧರಿಸಿಕೊಂಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಾರ್ವಜನಿಕ ಸಭೆ ಆಗಮಿಸಿದ್ದು, ಸ್ಥಳದಲ್ಲಿ ಕೆಲಕಾಲ ಕುತೂಹಲದ ವಾತಾವರಣ ನಿರ್ಮಾಣವಾಯಿತು.
ಮಧ್ಯಪ್ರದೇಶದ ಖಂಡ್ವಾ ನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ದೀಪಕ್ ‘ಮುಲ್ಲು’ ರಾಥೋರ್ ಅವರ ನೇತೃತ್ವದಲ್ಲಿ ಈ ಸಾಂಕೇತಿಕ ಪ್ರತಿಭಟನೆ ನಡೆದಿದೆ. ನಾಯಿ ವೇಷದಲ್ಲಿದ್ದ ವ್ಯಕ್ತಿಯನ್ನು ಕಂಡ ಅಧಿಕಾರಿಗಳು ಮತ್ತು ಸಾರ್ವಜನಿಕರು ಅಚ್ಚರಿಗೊಂಡಿದ್ದು, ಕೆಲವರು ಮೊಬೈಲ್‌ನಲ್ಲಿ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ.
ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚುತ್ತಿರುವುದು ಹಾಗೂ ನಾಯಿ ಕಡಿತದ ಪ್ರಕರಣಗಳು ಮುಂದುವರಿಯುತ್ತಿರುವುದನ್ನು ಪ್ರತಿಭಟನೆಯ ಮೂಲಕ ಗಮನಕ್ಕೆ ತರಲಾಗಿದೆ. ಸಮಸ್ಯೆ ನಿಯಂತ್ರಣಕ್ಕೆ ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆಯೂ ರಾಥೋರ್ ಪ್ರಶ್ನೆಗಳನ್ನು ಎತ್ತಿದ್ದಾರೆ.
ಅವರ ಪ್ರಕಾರ, 2024ರಲ್ಲಿ ಖಂಡ್ವಾದಲ್ಲಿ 3,168 ಬೀದಿ ನಾಯಿಗಳ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆನಡೆಸಲಾಗಿದ್ದು, ಇದಕ್ಕಾಗಿ ಸುಮಾರು ₹33.20 ಲಕ್ಷ ವೆಚ್ಚವಾಗಿದೆ. ಆದರೆ ಇಷ್ಟೊಂದು ವೆಚ್ಚ ಮಾಡಿದ ಬಳಿಕವೂ ಬೀದಿ ನಾಯಿಗಳ ಸಮಸ್ಯೆ ನಿಯಂತ್ರಣಕ್ಕೆ ಬಂದಿಲ್ಲ ಎಂಬುದು ಅವರ ಆಕ್ಷೇಪವಾಗಿದೆ.
ಇದೇ ವೇಳೆ, ಕಳೆದ ನಾಲ್ಕು ವರ್ಷಗಳಲ್ಲಿ ಖಂಡ್ವಾದಲ್ಲಿ 13,225ಕ್ಕೂ ಹೆಚ್ಚು ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ ಎಂಬ ಅಂಕಿಅಂಶವನ್ನು ಅವರು ಮುಂದಿಟ್ಟಿದ್ದಾರೆ. ನಾಯಿ ಸಂತಾನ ನಿಯಂತ್ರಣ ಯೋಜನೆಗೆ ಸಂಬಂಧಿಸಿದ ವೆಚ್ಚ, ಟೆಂಡರ್ ಪ್ರಕ್ರಿಯೆ ಹಾಗೂ ಕಾಮಗಾರಿಯ ಗುಣಮಟ್ಟದ ಕುರಿತು ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಕುರಿತು ಸಲ್ಲಿಸಿರುವ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗುವುದು. ತಪ್ಪು ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕಾಶೀರಾಮ್ ಬಡೋಲೆ ತಿಳಿಸಿದ್ದಾರೆ.
ನಾಯಿ ವೇಷದಲ್ಲಿ ನಡೆದ ಈ ವಿಶಿಷ್ಟ ಪ್ರತಿಭಟನೆಯ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿವೆ.





