19 August 2026 |

ಆಟವಾಡುತ್ತ ರೈಲ್ವೆ ಹಳಿಯತ್ತ ತೆರಳಿದ ಒಂದೂವರೆ ವರ್ಷದ ಮಗು ರೈಲು ಡಿಕ್ಕಿಗೆ ಬಲಿ

  • 19 Aug 2026 12:52:04 PM

ಕೇರಳ: ಮನೆಯವರ ಗಮನಕ್ಕೆ ಬಾರದೆ ರೈಲ್ವೆ ಹಳಿಯತ್ತ ತೆರಳಿದ ಒಂದೂವರೆ ವರ್ಷದ ಮಗು ರೈಲಿಗೆ ಸಿಲುಕಿ ಮೃತಪಟ್ಟಿರುವ ದುರ್ಘಟನೆ ಕೇರಳದ ಆಲಪ್ಪುಳ ಜಿಲ್ಲೆಯ ಅಂಬಲಪ್ಪುಳದಲ್ಲಿ ಮಂಗಳವಾರ ಸಂಜೆ ನಡೆದಿದೆ.

 

ವಲಂಜವಾಜಿ ನಿವಾಸಿಗಳಾದ ವಿನೀತ್ ಹಾಗೂ ಸೂರ್ಯ ಬಾಬು ದಂಪತಿಯ ಏಕೈಕ ಪುತ್ರ ಧೃಣವ್ ಮೃತ ಬಾಲಕ. ಘಟನೆಗೂ ಮುನ್ನ ಮಗು ವಲಂಜವಾಜಿಯಲ್ಲಿರುವ ಅಜ್ಜಿ ಮನೆಯಲ್ಲಿ ಇತ್ತು. ಅಲ್ಲಿಂದ ಸುಮಾರು 30 ಮೀಟರ್ ದೂರದಲ್ಲಿದ್ದ ರೈಲ್ವೆ ಹಳಿಯ ಕಡೆಗೆ ಮಗು ನಡೆದುಕೊಂಡು ಹೋಗಿದ್ದು, ಅದೇ ಸಮಯದಲ್ಲಿ ಬಂದ ರೈಲು ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

 

ವಿನೀತ್ ಹಾಗೂ ಸೂರ್ಯ ಬಾಬು ಇಬ್ಬರೂ ಕೆಲಸಕ್ಕೆ ತೆರಳುವ ಸಂದರ್ಭದಲ್ಲಿ ಮಗುವನ್ನು ಅಜ್ಜಿಯ ಆರೈಕೆಯಲ್ಲಿ ಬಿಟ್ಟು ಹೋಗುತ್ತಿದ್ದರು. ಘಟನೆ ನಡೆದ ದಿನ ಬಾಲಕನ ಅಜ್ಜ ಕೆಲಸದ ನಿಮಿತ್ತ ಮನೆಯಿಂದ ಹೊರಗಿದ್ದರು. ಅಜ್ಜಿ ಮನೆಯಲ್ಲಿದ್ದರೂ ಅವರ ಗಮನ ತಪ್ಪಿಸಿಕೊಂಡು ಮಗು ರೈಲ್ವೆ ಹಳಿಯತ್ತ ತೆರಳಿದೆ ಎನ್ನಲಾಗಿದೆ.

 

ಮಗುವಿಗೆ ರೈಲು ಡಿಕ್ಕಿಯಾದ ಕೂಡಲೇ ಲೋಕೋ ಪೈಲಟ್ ರೈಲನ್ನು ನಿಲ್ಲಿಸಿದ್ದಾರೆ. ಬಳಿಕ ಬಾಲಕನ ಮೃತದೇಹವನ್ನು ಹಳಿಯಿಂದ ಹೊರತೆಗೆಯಲಾಯಿತು. ತಮ್ಮ ಏಕೈಕ ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ದುಃಖದ ಆಕ್ರಂದನ ಮನಕಲಕುವಂತಿತ್ತು.