ಮಂಗಳೂರು: ರಾಜ್ಯಾದ್ಯಂತ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಹಂತದಲ್ಲಿ 336 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಆದರೆ ಜಿಲ್ಲೆಯಲ್ಲಿ ಖಾಲಿ ಇರುವ ಒಟ್ಟು ಹುದ್ದೆಗಳಿಗೆ ಹೋಲಿಸಿದರೆ ಇದು ಕೇವಲ ಶೇ.16ರಷ್ಟು ಮಾತ್ರವಾಗಿದೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಮುಂದುವರಿದಿದೆ. ಜಿಲ್ಲೆಯ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಒಟ್ಟು 6,022 ಶಿಕ್ಷಕರ ಹುದ್ದೆಗಳಿಗೆ ಮಂಜೂರಾತಿ ಇದ್ದು, ಸದ್ಯ 2,088 ಹುದ್ದೆಗಳು ಖಾಲಿ ಉಳಿದಿವೆ.
ಇವುಗಳಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ 1,705 ಹಾಗೂ ಪ್ರೌಢಶಾಲಾ ವಿಭಾಗದಲ್ಲಿ 383 ಹುದ್ದೆಗಳು ಖಾಲಿಯಾಗಿವೆ. ಪ್ರಸ್ತುತ ನೇಮಕಾತಿಯಲ್ಲಿ 336 ಹುದ್ದೆಗಳು ಭರ್ತಿಯಾದರೂ, ಇನ್ನೂ 1,752 ಹುದ್ದೆಗಳು ಖಾಲಿ ಉಳಿಯಲಿವೆ.
ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಹುದ್ದೆಗಳು
ಬಂಟ್ವಾಳದಲ್ಲಿ 1,080 ಮಂಜೂರಾದ ಹುದ್ದೆಗಳ ಪೈಕಿ 443 ಖಾಲಿ ಇವೆ. ಬೆಳ್ತಂಗಡಿಯಲ್ಲಿ 885 ಹುದ್ದೆಗಳಲ್ಲಿ 318, ಮಂಗಳೂರು ಉತ್ತರದಲ್ಲಿ 416ರಲ್ಲಿ 161 ಹಾಗೂ ಮಂಗಳೂರು ದಕ್ಷಿಣದಲ್ಲಿ 471ರಲ್ಲಿ 150 ಹುದ್ದೆಗಳು ಖಾಲಿಯಾಗಿವೆ.
ಮೂಡುಬಿದಿರೆಯಲ್ಲಿ 278 ಮಂಜೂರಾದ ಹುದ್ದೆಗಳಲ್ಲಿ 104, ಪುತ್ತೂರಿನಲ್ಲಿ 892ರಲ್ಲಿ 329 ಹಾಗೂ ಸುಳ್ಯದಲ್ಲಿ 478 ಹುದ್ದೆಗಳಲ್ಲಿ 200 ಹುದ್ದೆಗಳು ಖಾಲಿ ಇವೆ.
ಪ್ರೌಢಶಾಲೆಗಳಲ್ಲಿ ಖಾಲಿ ಹುದ್ದೆಗಳ ವಿವರ
ಬಂಟ್ವಾಳದಲ್ಲಿ 365 ಮಂಜೂರಾದ ಹುದ್ದೆಗಳಲ್ಲಿ 110, ಬೆಳ್ತಂಗಡಿಯಲ್ಲಿ 305ರಲ್ಲಿ 84 ಹುದ್ದೆಗಳು ಖಾಲಿ ಇವೆ. ಮಂಗಳೂರು ಉತ್ತರದಲ್ಲಿ 193ರಲ್ಲಿ 37 ಹಾಗೂ ಮಂಗಳೂರು ದಕ್ಷಿಣದಲ್ಲಿ 208ರಲ್ಲಿ 44 ಹುದ್ದೆಗಳು ಖಾಲಿಯಾಗಿವೆ.
ಮೂಡುಬಿದಿರೆಯಲ್ಲಿ 78 ಹುದ್ದೆಗಳಲ್ಲಿ 17, ಪುತ್ತೂರಿನಲ್ಲಿ 215ರಲ್ಲಿ 44 ಹಾಗೂ ಸುಳ್ಯದಲ್ಲಿ 158 ಮಂಜೂರಾದ ಹುದ್ದೆಗಳಲ್ಲಿ 47 ಹುದ್ದೆಗಳು ಭರ್ತಿಯಾಗಬೇಕಿವೆ.
ಇದರ ಜೊತೆಗೆ, ಪ್ರಸಕ್ತ ಶೈಕ್ಷಣಿಕ ಅವಧಿಯಲ್ಲಿ ಜಿಲ್ಲೆಯ ಶಾಲೆಗಳಲ್ಲಿ ಬೋಧನಾ ವ್ಯವಸ್ಥೆ ನಿರಂತರವಾಗಿರಲು ಒಟ್ಟು 1,584 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ.





