ಮಂಗಳೂರು: ಎರಡು ತಿಂಗಳ ಪಡಿತರ ಸಾಮಗ್ರಿಗಳನ್ನು ಒಟ್ಟಿಗೆ ವಿತರಿಸಲಾಗುತ್ತಿರುವ ನಡುವೆಯೇ ಸರ್ವರ್ ತಾಂತ್ರಿಕ ದೋಷ ನ್ಯಾಯಬೆಲೆ ಅಂಗಡಿಗಳಲ್ಲಿ ಸಮಸ್ಯೆ ಉಂಟುಮಾಡಿದೆ. ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪಡಿತರ ಅಂಗಡಿಗಳಲ್ಲಿ ಫಲಾನುಭವಿಗಳು ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ.
ಒಂದು ಪಡಿತರ ಚೀಟಿಗೆ ಎರಡು ಬಾರಿ ಬೆರಳಚ್ಚು ದಾಖಲಿಸಬೇಕಾಗಿರುವುದರಿಂದ ಪ್ರಕ್ರಿಯೆ ಪೂರ್ಣಗೊಳ್ಳಲು ಹೆಚ್ಚಿನ ಸಮಯ ಬೇಕಾಗುತ್ತಿದೆ. ಬೆರಳಚ್ಚು ದೃಢೀಕರಣವಾದ ನಂತರವೇ ಪಡಿತರ ಸಾಮಗ್ರಿ ವಿತರಿಸಲು ಅವಕಾಶ ಇರುವುದರಿಂದ ಅಂಗಡಿಗಳ ಎದುರು ಜನಸಂದಣಿ ಹೆಚ್ಚಾಗಿದೆ. ಕೆಲವು ಕಡೆಗಳಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದರೂ, ಬಹುತೇಕ ಅಂಗಡಿಗಳಲ್ಲಿ ಫಲಾನುಭವಿಗಳು ನಿಂತುಕೊಂಡೇ ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ.
ಸರ್ಕಾರದಿಂದ ಉಚಿತ ಪಡಿತರ ಪಡೆಯಲು ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಅದರಲ್ಲೂ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚಿರುವುದರಿಂದ ದೀರ್ಘಕಾಲ ಸರತಿಯಲ್ಲಿ ನಿಲ್ಲುವುದು ಅವರಿಗೆ ಕಷ್ಟವಾಗುತ್ತಿದೆ.
ಇದರ ನಡುವೆ ಫಲಾನುಭವಿಗಳಿಗೆ ಇ-ಕೆವೈಸಿ ಪೂರ್ಣಗೊಳಿಸುವಂತೆ ಸರ್ಕಾರ ಸೂಚಿಸಿರುವುದು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಮತ್ತೊಂದು ಸವಾಲಾಗಿದೆ. ಪಡಿತರ ವಿತರಣೆ ಮತ್ತು ಇ-ಕೆವೈಸಿ ಪ್ರಕ್ರಿಯೆಯನ್ನು ಒಂದೇ ಸಮಯದಲ್ಲಿ ನಿರ್ವಹಿಸುವುದು ಕಷ್ಟವಾಗುತ್ತಿದೆ ಎಂದು ಅಂಗಡಿ ನಿರ್ವಾಹಕರು ತಿಳಿಸಿದ್ದಾರೆ.
ಸದ್ಯ ಪಡಿತರ ವಿತರಣೆಯ ವೇಳೆ ಬೆರಳಚ್ಚು ದೃಢೀಕರಣಕ್ಕೆ ಸುಮಾರು 15ರಿಂದ 30 ನಿಮಿಷಗಳವರೆಗೆ ಸಮಯ ಬೇಕಾಗುತ್ತಿದೆ. ಇದರ ಜೊತೆಗೆ ಇ-ಕೆವೈಸಿ ಪ್ರಕ್ರಿಯೆ ಆರಂಭಿಸಿದರೆ ವಿತರಣೆಯಲ್ಲಿ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಸರತಿ ಸಾಲು ಹೆಚ್ಚಿರುವ ಸಂದರ್ಭಗಳಲ್ಲಿ ಜನರಿಗೆ ಮಧ್ಯಾಹ್ನದ ನಂತರ ಅಥವಾ ಜನಸಂದಣಿ ಕಡಿಮೆಯಾದ ಸಮಯದಲ್ಲಿ ಬರುವಂತೆ ಸೂಚಿಸಲಾಗುತ್ತಿದೆ. ಆದರೆ ಅಂಗಡಿಗೆ ಬಂದ ಯಾವುದೇ ಫಲಾನುಭವಿಯನ್ನು ಪಡಿತರ ನೀಡದೆ ಹಿಂದಕ್ಕೆ ಕಳುಹಿಸುವುದಿಲ್ಲ ಎಂದು ಅಂಗಡಿ ನಿರ್ವಾಹಕರು ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿಯೂ ಇದೇ ರೀತಿಯ ಸರ್ವರ್ ತೊಂದರೆ ಕಾಣಿಸಿಕೊಂಡಿದ್ದು, ಪಡಿತರ ಸಾಮಗ್ರಿ ಪಡೆಯಲು ಫಲಾನುಭವಿಗಳು ಹಲವು ಗಂಟೆಗಳ ಕಾಲ ನ್ಯಾಯಬೆಲೆ ಅಂಗಡಿಗಳ ಮುಂದೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.





