ಮಂಗಳೂರು: ವ್ಯವಹಾರದ ಹಣ ಸಂಗ್ರಹಿಸಿಕೊಂಡು ಬೈಕ್‌ನಲ್ಲಿ ತೆರಳುತ್ತಿದ್ದ ಸಿಮೆಂಟ್ ಹಾಗೂ ಕಬ್ಬಿಣ ಮಾರಾಟ ಸಂಸ್ಥೆಯ ಉದ್ಯೋಗಿಯೊಬ್ಬರನ್ನು ನಾಲ್ವರು ಅಪರಿಚಿತರು ಅಡ್ಡಗಟ್ಟಿ ₹8.52 ಲಕ್ಷ ನಗದು ಹಣವನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಣ್ಣೂರಿನ ಸಿಮೆಂಟ್ ಹಾಗೂ ಕಬ್ಬಿಣ ಮಾರಾಟ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಮಯ್ಯದಿ (40) ಅವರು ಆ.20ರಂದು ವಿವಿಧ ಅಂಗಡಿಗಳಿಗೆ ತೆರಳಿ ಸಂಸ್ಥೆಯ ವ್ಯವಹಾರದ ಹಣ ಸಂಗ್ರಹಿಸಿದ್ದರು. ಬಳಿಕ ಬೈಕ್‌ನಲ್ಲಿ ಬಂಟ್ವಾಳ ಕಕ್ಕೆಪದವಿನಿಂದ ಪಾಣೆಮಂಗಳೂರು ಕಡೆಗೆ ತೆರಳುತ್ತಿದ್ದರು.
ಮಧ್ಯಾಹ್ನ ಸುಮಾರು 1 ಗಂಟೆಗೆ ಮಣಿನಾಲ್ಕೂರು ಮುಲ್ಕಾಜೆ ಮಾಡ ಎಂಬಲ್ಲಿ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ಅಪರಿಚಿತರು ಮಯ್ಯದಿ ಅವರ ಬೈಕ್‌ಗೆ ಅಡ್ಡಗಟ್ಟಿದ್ದಾರೆ. ನಂತರ ತಲವಾರು ತೋರಿಸಿ ಬೆದರಿಸಿ, ಅವರ ಬಳಿಯಿದ್ದ ₹8,52,000 ನಗದು ಹಣವನ್ನು ಸುಲಿಗೆ ಮಾಡಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.





