ಪುತ್ತೂರು: ನಿರಂತರ ಮಳೆಯಿಂದ ಹೊಳೆ ಅಪಾಯಕಾರಿಯಾಗಿ ಉಕ್ಕಿ ಹರಿಯುತ್ತಿದ್ದರೂ, ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದ ಮನೆಗಳಿಗೆ ಬೆಳಕು ಮರಳಿಸಲು ಮೆಸ್ಕಾಂ ಸಿಬ್ಬಂದಿ ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸಿದ ಘಟನೆ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ದೂಮಡ್ಕದಲ್ಲಿ ನಡೆದಿದೆ.
ದೂಮಡ್ಕದ ಹೊಳೆ ಬದಿಯಲ್ಲಿ ಸುಮಾರು 12 ಮನೆಗಳಿವೆ. ಈ ಮನೆಗಳಿಗೆ ಹೊಳೆಯ ಮತ್ತೊಂದು ಬದಿಯಿಂದ ಎಲ್‌ಟಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು. ಇತ್ತೀಚಿನ ಭಾರೀ ಮಳೆಯಿಂದ ಸೀರೆ ಹೊಳೆ ತುಂಬಿ ಹರಿಯುತ್ತಿದ್ದು, ಹೊಳೆಯ ದಡದಲ್ಲಿದ್ದ ಈಚಲು ಮರವೊಂದು ವಿದ್ಯುತ್ ಮಾರ್ಗದ ಮೇಲೆ ಬಿದ್ದಿದೆ. ಇದರಿಂದ ನಾಲ್ಕು ತಂತಿಗಳ ಪೈಕಿ ಎರಡು ತಂತಿಗಳು ತುಂಡಾಗಿ ಹೊಳೆಗೆ ಬಿದ್ದಿದ್ದವು.
ತಂತಿಗಳು ನೀರಿನ ರಭಸದಲ್ಲಿ ಕೊಚ್ಚಿಹೋಗದಂತೆ ಸ್ಥಳೀಯ ಜಾನು ನಾಯ್ಕ ಹಾಗೂ ಇತರರು ಅವುಗಳನ್ನು ಹಗ್ಗದ ಸಹಾಯದಿಂದ ಮರಕ್ಕೆ ಕಟ್ಟಿ ಸುರಕ್ಷಿತವಾಗಿಟ್ಟಿದ್ದರು. ಆದರೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದ್ದರಿಂದ ಅಲ್ಲಿನ 12 ಕುಟುಂಬಗಳು ಕತ್ತಲಿನಲ್ಲಿ ಕಾಲ ಕಳೆಯುವಂತಾಗಿತ್ತು.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಮೆಸ್ಕಾಂ ಪವರ್‌ಮ್ಯಾನ್‌ಗಳಾದ ಬಂದೇ ನವಾಜ್ ಮತ್ತು ಪ್ರವೀಣ್ ಅವರು ಸ್ಥಳೀಯರೊಬ್ಬರ ಸಹಾಯದೊಂದಿಗೆ ಉಕ್ಕಿ ಹರಿಯುತ್ತಿದ್ದ ಹೊಳೆಗೆ ಇಳಿದರು. ವಿದ್ಯುತ್ ತಂತಿ ಹಾಗೂ ಅದಕ್ಕೆ ಕಟ್ಟಿದ್ದ ಹಗ್ಗವನ್ನು ಹಿಡಿದುಕೊಂಡು ನೀರಿನ ಬಲವಾದ ಸೆಳೆತದ ನಡುವೆಯೇ ಈಜುತ್ತಾ ಎದುರು ದಡ ತಲುಪಿದರು. ಈ ವೇಳೆ ದಡದಲ್ಲಿದ್ದ ಪವರ್‌ಮ್ಯಾನ್ ಬಸವರಾಜ್ ಸೇರಿದಂತೆ ಇತರರು ತಂತಿಯನ್ನು ಅಗತ್ಯ ಸ್ಥಳಕ್ಕೆ ತಲುಪಿಸಲು ನೆರವಾದರು.
ಮಳೆ ಮತ್ತು ಹೊಳೆಯ ರಭಸದ ನಡುವೆಯೂ ಸಿಬ್ಬಂದಿ ತಂತಿಯನ್ನು ನಿಗದಿತ ಸ್ಥಳಕ್ಕೆ ಕೊಂಡೊಯ್ದು ಮರುಜೋಡಣೆ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಇದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದ ಮನೆಗಳಿಗೆ ಮತ್ತೆ ವಿದ್ಯುತ್ ಪೂರೈಕೆ ಕಲ್ಪಿಸುವ ಕಾರ್ಯ ಸಾಧ್ಯವಾಯಿತು.
ಕಾರ್ಯಾಚರಣೆ ನಡೆಯುವ ವೇಳೆ ಮೆಸ್ಕಾಂನ ಬೆಟ್ಟಂಪಾಡಿ ಶಾಖೆಯ ಕಿರಿಯ ಎಂಜಿನಿಯರ್ ಪುತ್ತು ಜೆ. ಅವರು ಸ್ಥಳದಲ್ಲಿದ್ದು ಸಿಬ್ಬಂದಿಗೆ ಅಗತ್ಯ ಮಾರ್ಗದರ್ಶನ ನೀಡಿದರು. ಮೆಸ್ಕಾಂ ಸಿಬ್ಬಂದಿಯ ಈ ಸಾಹಸಮಯ ಕಾರ್ಯಾಚರಣೆಗೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.





