20 August 2026 |

ಕಂಬಳದಲ್ಲಿ ಶೀಘ್ರದಲ್ಲೇ ಲೈವ್ ಟೈಮಿಂಗ್ಸ್‌: ತಂತ್ರಜ್ಞಾನಕ್ಕೆ ಹೊಸ ಹೆಜ್ಜೆ

  • 20 Aug 2026 02:42:24 PM

ಮಂಗಳೂರು: ತುಳುನಾಡಿನ ಜನಪ್ರಿಯ ಜಾನಪದ ಕ್ರೀಡೆಯಾದ ಕಂಬಳದಲ್ಲಿ ತಂತ್ರಜ್ಞಾನದ ಬಳಕೆ ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಕಂಡುಬಂದಿದೆ. ಇನ್ನು ಮುಂದೆ ಕಂಬಳದ ಓಟದ ಸಮಯವನ್ನು ಪ್ರೇಕ್ಷಕರು ಸ್ಥಳದಲ್ಲೇ ನೇರವಾಗಿ ವೀಕ್ಷಿಸುವಂತೆ ಮಾಡುವ ಹೊಸ ಪ್ರಯತ್ನಕ್ಕೆ ಸಿದ್ಧತೆ ನಡೆಯುತ್ತಿದೆ.

 

ಪ್ರಸ್ತುತ ಕಂಬಳ ಸ್ಪರ್ಧೆಗಳಲ್ಲಿ ಓಟದ ಸಮಯವನ್ನು ಸೆಕೆಂಡಿನ ನೂರನೇ ಭಾಗದಷ್ಟು ನಿಖರತೆಯಲ್ಲಿ ದಾಖಲಿಸಲಾಗುತ್ತದೆ. ಆದರೆ ಈ ಸಮಯವನ್ನು ಸ್ಪರ್ಧಾ ಸ್ಥಳದಲ್ಲಿರುವ ಎಲ್ಲರಿಗೂ ತಕ್ಷಣ ಕಾಣುವ ರೀತಿಯಲ್ಲಿ ಪ್ರದರ್ಶಿಸುವ ವ್ಯವಸ್ಥೆ ಇಲ್ಲ. ಇದೀಗ ರೂಪಿಸಲಾಗುತ್ತಿರುವ ಹೊಸ ಮಾದರಿ ಕಾರ್ಯರೂಪಕ್ಕೆ ಬಂದರೆ, ಕಂಬಳ ಕರೆಯಲ್ಲಿ ಓಡುವ ಎರಡು ಜೋಡಿ ಕೋಣಗಳ ಅಂತಿಮ ಸಮಯವನ್ನು ದೊಡ್ಡ ಡಿಸ್‌ಪ್ಲೇ ಮೂಲಕ ನೇರವಾಗಿ ಪ್ರದರ್ಶಿಸಲು ಸಾಧ್ಯವಾಗಲಿದೆ.

 

ಮಂಜೊಟ್ಟಿ ಸಮೀಪ ಮಾತ್ರವಲ್ಲದೆ, ಕಂಬಳದ ವಿವಿಧ ಭಾಗಗಳಲ್ಲಿಯೂ ಲೈವ್ ಟೈಮಿಂಗ್ಸ್‌ ನೋಡಲು ಅನುಕೂಲವಾಗುವ ವ್ಯವಸ್ಥೆ ರೂಪಿಸುವ ಉದ್ದೇಶ ಹೊಂದಲಾಗಿದೆ. ಇತ್ತೀಚೆಗೆ ನಡೆದ ಕಂಬಳ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಲೈವ್ ಸ್ಕೋರ್‌ಬೋರ್ಡ್‌ ಆಧಾರಿತ ಈ ಹೊಸ ಪರಿಕಲ್ಪನೆಯನ್ನು ಪರಿಚಯಿಸಲಾಗಿದೆ.

 

ಕಂಬಳ ಕೋಣಗಳ ಮಾಲೀಕರ ವಿವರ, ಓಟಗಾರರ ಹೆಸರು, ಸ್ಪರ್ಧೆಯಲ್ಲಿ ಭಾಗವಹಿಸಿದ ಕೋಣಗಳ ಹೆಸರು ಹಾಗೂ ಅವು ದಾಖಲಿಸಿದ ಸಮಯ ಸೇರಿದಂತೆ ಹಲವು ಮಾಹಿತಿಯನ್ನು ಒಳಗೊಂಡ ಸಾಫ್ಟ್‌ವೇರ್‌ ಅನ್ನು ಆದಿತ್ಯ ಕರ್ಕೇರ ಅವರು ಅಭಿವೃದ್ಧಿಪಡಿಸುತ್ತಿದ್ದಾರೆ.

 

ಕಂಬಳದ ಟೈಮಿಂಗ್ಸ್‌ ತಂತ್ರಜ್ಞಾನದ ಬೆಳವಣಿಗೆ

ಆಧುನಿಕ ಕಂಬಳದಲ್ಲಿ ತಂತ್ರಜ್ಞಾನದ ಬಳಕೆ ಹಂತಹಂತವಾಗಿ ಅಭಿವೃದ್ಧಿಯಾಗಿದೆ.

1. 1970ರ ದಶಕ: ಆಧುನಿಕ ಕಂಬಳದಲ್ಲಿ ಸ್ಪರ್ಧಾತ್ಮಕ ಓಟದ ಪರಂಪರೆ ಹೆಚ್ಚು ವೇಗ ಪಡೆದುಕೊಂಡಿತು.

2. ಆರಂಭಿಕ ಹಂತ: ಯಾವ ಕೋಣ ಮೊದಲು ಮಂಜೊಟ್ಟಿಗೆ ಕಾಲಿಟ್ಟಿದೆ ಎಂಬುದನ್ನು ಕಣ್ಣಾರೆ ಗಮನಿಸುವ ಮೂಲಕ ಗೆಲುವು-ಸೋಲನ್ನು ನಿರ್ಧರಿಸಲಾಗುತ್ತಿತ್ತು.

3. ಸ್ಟಾಪ್ ವಾಚ್ ಬಳಕೆ: ನಂತರ ಸ್ಟಾಪ್ ವಾಚ್ ಮೂಲಕ ಓಟದ ಸಮಯ ದಾಖಲಿಸುವ ಪದ್ಧತಿ ಆರಂಭವಾಯಿತು. ಒಂಟಿಯಾಗಿ ಓಡುವ ಕೋಣಗಳ ಸಮಯವನ್ನು ದಾಖಲಿಸಿ ಫಲಿತಾಂಶ ನಿರ್ಧರಿಸಲಾಗುತ್ತಿತ್ತು.

4. ವೀಡಿಯೋ ರೆಕಾರ್ಡಿಂಗ್: ಬಳಿಕ ಓಟದ ಫಿನಿಶ್‌ ಅನ್ನು ವೀಡಿಯೋದಲ್ಲಿ ದಾಖಲಿಸಿ, ಅಗತ್ಯವಿದ್ದಾಗ ಅದನ್ನು ಮರುಪರಿಶೀಲಿಸುವ ವ್ಯವಸ್ಥೆ ಜಾರಿಗೆ ಬಂತು.

5. ಸೆನ್ಸಾರ್‌ಗಳ ಅಳವಡಿಕೆ: ತಂತ್ರಜ್ಞಾನ ಮತ್ತಷ್ಟು ಸುಧಾರಿಸಿದಂತೆ ಫಿನಿಶ್‌ ಲೈನ್‌ನಲ್ಲಿ ಸೆನ್ಸಾರ್‌ಗಳನ್ನು ಬಳಸಲಾಯಿತು. ಕೋಣಗಳು ಮಂಜೊಟ್ಟಿಗೆ ತಲುಪಿದ ಕ್ರಮವನ್ನು ತಾಂತ್ರಿಕವಾಗಿ ದಾಖಲಿಸುವ ವ್ಯವಸ್ಥೆ ರೂಪುಗೊಂಡಿತು.

6. 0.01 ಸೆಕೆಂಡ್ ನಿಖರತೆ: ನಂತರ ಓಟದ ಆರಂಭ ಮತ್ತು ಅಂತ್ಯ ಎರಡನ್ನೂ ಸೆನ್ಸಾರ್‌ಗಳ ಮೂಲಕ ದಾಖಲಿಸುವ ವ್ಯವಸ್ಥೆ ಬಂದಿದ್ದು, 0.01 ಸೆಕೆಂಡ್‌ಗಳಷ್ಟು ನಿಖರವಾಗಿ ಫಲಿತಾಂಶ ನಿರ್ಧರಿಸುವ ಸಾಧ್ಯತೆ ದೊರೆಯಿತು.

7. ಐಕಳ ಕಂಬಳ, 2024: ಆಟೋಮೇಟೆಡ್ ಟೈಮ್ ಗೇಟ್ ಮತ್ತು ಫೋಟೋ ಫಿನಿಶ್ ರಿಸಲ್ಟ್ ಸಿಸ್ಟಮ್‌ಗಳನ್ನು ಅಳವಡಿಸಿ ತಂತ್ರಜ್ಞಾನದ ಮತ್ತೊಂದು ಹಂತಕ್ಕೆ ಕಂಬಳ ಕಾಲಿಟ್ಟಿತು.

8. ಮಿಯ್ಯಾರು ಕುದಿ ಕಂಬಳ: ಇಲ್ಲಿ ಕೂಡ ಪ್ರಾಯೋಗಿಕವಾಗಿ ಫೋಟೋ ಫಿನಿಶ್ ರಿಸಲ್ಟ್ ಸಿಸ್ಟಮ್‌ ಅನ್ನು ಬಳಸಲಾಯಿತು.

9. ಲೈವ್ ಡಿಸ್‌ಪ್ಲೇ: ಇದೀಗ ಸ್ಪರ್ಧೆಯ ಸಮಯವನ್ನು ದೊಡ್ಡ ಪರದೆಯಲ್ಲಿ ನೇರವಾಗಿ ಪ್ರದರ್ಶಿಸುವ ಹೊಸ ಹಂತಕ್ಕೆ ಕಂಬಳದ ತಂತ್ರಜ್ಞಾನ ಸಾಗುತ್ತಿದೆ.

 

ಈ ವ್ಯವಸ್ಥೆ ಯಶಸ್ವಿಯಾಗಿ ಜಾರಿಗೆ ಬಂದರೆ ಕಂಬಳ ಸ್ಪರ್ಧೆಗಳ ಫಲಿತಾಂಶವನ್ನು ಹೆಚ್ಚು ಪಾರದರ್ಶಕವಾಗಿ ಮತ್ತು ಪ್ರೇಕ್ಷಕರಿಗೆ ತಕ್ಷಣ ಅರ್ಥವಾಗುವ ರೀತಿಯಲ್ಲಿ ತಿಳಿಯಲು ಅನುಕೂಲವಾಗಲಿದೆ.