ಗುರುವಾಯೂರು: ಸ್ಕಾಟ್ಲೆಂಡ್ ಸಂಸದ ಮಾರ್ಟಿನ್ ಡೇ ಅವರು ಕೇರಳ ಮೂಲದ ನಿದಿನ್ ಚಂದ್ ಅವರೊಂದಿಗೆ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದ ಸನ್ನಿಧಿಯಲ್ಲಿ ಸಾಂಪ್ರದಾಯಿಕ ವಿವಾಹ ನೆರವೇರಿಸಿಕೊಂಡಿದ್ದಾರೆ.
ಎರ್ನಾಕುಳಂ ಜಿಲ್ಲೆಯ ಪಿರವಂ ಸಮೀಪದ ನಿವಾಸಿಯಾಗಿರುವ ನಿದಿನ್ ಚಂದ್ ಅವರು 2008ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಬ್ರಿಟನ್‌ಗೆ ತೆರಳಿದ್ದರು. ಅಲ್ಲಿ ಐಟಿ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿದ್ದ ವೇಳೆ ಮಾರ್ಟಿನ್ ಡೇ ಅವರನ್ನು ಭೇಟಿಯಾಗಿದ್ದರು.
ಮಾರ್ಟಿನ್ ಡೇ ಅವರು ಸ್ಕಾಟಿಷ್ ನ್ಯಾಷನಲ್ ಪಾರ್ಟಿಯ ರಾಜಕಾರಣಿಯಾಗಿದ್ದು, ಬ್ರಿಟನ್ ಸಂಸತ್ತಿನ ಮಾಜಿ ಸದಸ್ಯರಾಗಿದ್ದಾರೆ. ಪ್ರಸ್ತುತ ಸ್ಕಾಟಿಷ್ ಸಂಸತ್ತಿನ ಸದಸ್ಯರಾಗಿದ್ದಾರೆ.
ಇಬ್ಬರೂ ಹಲವು ವರ್ಷಗಳ ಹಿಂದೆಯೇ ಬ್ರಿಟನ್‌ನಲ್ಲಿ ಕಾನೂನುಬದ್ಧವಾಗಿ ವಿವಾಹವಾಗಿದ್ದರು. ಆದರೆ, ನಿದಿನ್ ಅವರಿಗೆ ಗುರುವಾಯೂರಿನಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾಗಬೇಕು ಎಂಬುದು ಬಹುಕಾಲದ ಆಸೆಯಾಗಿತ್ತು. ಪ್ರವಾಹ, ಕೋವಿಡ್ ಸಾಂಕ್ರಾಮಿಕ ಸೇರಿದಂತೆ ಹಲವು ಕಾರಣಗಳಿಂದ ಆ ಆಸೆ ಈಡೇರಲು ವಿಳಂಬವಾಗಿತ್ತು.
ಕೊನೆಗೂ ಮಂಗಳವಾರ ಗುರುವಾಯೂರಿನಲ್ಲಿ ನಡೆದ ಸಾಂಪ್ರದಾಯಿಕ ವಿವಾಹದ ಮೂಲಕ ನಿದಿನ್ ಅವರ ಹಲವು ವರ್ಷಗಳ ಕನಸು ನನಸಾಗಿದೆ. ಕುಟುಂಬಸ್ಥರು ಹಾಗೂ ಆಪ್ತರು ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು.





