20 August 2026 |

ಬಹುಕೋಟಿ ಮೌಲ್ಯದ ಡ್ರಗ್ಸ್ ಪತ್ತೆ: ಬಂಟ್ವಾಳ ಪೊಲೀಸರಿಗೆ ಬಿಜೆಪಿ ಯುವಮೋರ್ಚಾ ಅಭಿನಂದನೆ

  • 20 Aug 2026 09:34:41 AM

ಬಂಟ್ವಾಳ: ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಬಂಟ್ವಾಳ ಪೊಲೀಸರು ಕಾರ್ಯಾಚರಣೆ ನಡೆಸಿ ಬಹುಕೋಟಿ ಮೌಲ್ಯದ ಮಾದಕವಸ್ತು ಸಾಗಾಟವನ್ನು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿರುವ ಹಿನ್ನೆಲೆಯಲ್ಲಿ, ಬಿಜೆಪಿ ಯುವಮೋರ್ಚಾ ಬಂಟ್ವಾಳ ಮಂಡಲದ ಪದಾಧಿಕಾರಿಗಳು ಬಂಟ್ವಾಳ ಗ್ರಾಮಾಂತರ ಠಾಣೆಗೆ ಭೇಟಿ ನೀಡಿದರು.

 

ಈ ಸಂದರ್ಭದಲ್ಲಿ ಪೊಲೀಸ್ ವೃತ್ತ ನಿರೀಕ್ಷಕರು ಹಾಗೂ ಠಾಣಾಧಿಕಾರಿಗಳನ್ನು ಭೇಟಿ ಮಾಡಿ ಪೊಲೀಸರ ಕಾರ್ಯಾಚರಣೆಗೆ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ, ಮಾದಕವಸ್ತು ದಂಧೆಯ ಪ್ರಮುಖ ರೂವಾರಿಗಳನ್ನು ಕೂಡಲೇ ಪತ್ತೆಹಚ್ಚಿ ಬಂಧಿಸುವಂತೆ ಮನವಿ ಸಲ್ಲಿಸಲಾಯಿತು.

 

ಈ ಸಂದರ್ಭದಲ್ಲಿ ಬಂಟ್ವಾಳ ಯುವಮೋರ್ಚಾ ಅಧ್ಯಕ್ಷ ದಿನೇಶ್ ಶೆಟ್ಟಿ ದಂಬೆದಾರ್, ಪ್ರಧಾನ ಕಾರ್ಯದರ್ಶಿಗಳಾದ ಹರಿಪ್ರಸಾದ್ ಭಂಡಾರಿಬೆಟ್ಟು ಹಾಗೂ ಸಂಪತ್ ಕೋಟ್ಯಾನ್ ಕಡೇಶಿವಾಲಯ, ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಸುರೇಶ್ ಕೋಟ್ಯಾನ್ ನರಿಕೊಂಬು, ಬಂಟ್ವಾಳ ಯುವಮೋರ್ಚಾ ಮಂಡಲ ಉಪಾಧ್ಯಕ್ಷರಾದ ಕಾರ್ತಿಕ್ ಬಲ್ಲಾಳ್ ಹಾಗೂ ಸಂದೀಪ್ ಪೂಜಾರಿ ಕೆಲಿಂಜ, ಕಾರ್ಯದರ್ಶಿಗಳಾದ ಕೌಶಲ್ ಶೆಟ್ಟಿ ಅಮ್ಟೂರು ಹಾಗೂ ಹೇಮಚಂದ್ರ ಶಂಭೂರು, ಪ್ರಮುಖರಾದ ಮನೋಜ್ ಕುಲಾಲ್, ದೀಪಕ್ ಶೆಟ್ಟಿಗಾರ್, ಪ್ರಣಾಮ್ ಅಜ್ಜಿಬೆಟ್ಟು ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

ಆಗಸ್ಟ್ 16ರಂದು ತಡರಾತ್ರಿ ಬಂಟ್ವಾಳ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕವಸ್ತು ಸಾಗಾಟವನ್ನು ಪತ್ತೆಹಚ್ಚಿದ್ದರು. ಹಾಸನ ಕಡೆಯಿಂದ ಮಂಗಳೂರು ಕಡೆಗೆ ಕಾರಿನಲ್ಲಿ ಮಾದಕವಸ್ತು ಸಾಗಾಟವಾಗುತ್ತಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿ ಆಧರಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಕಡೇಶಿವಾಲಯ ಗ್ರಾಮದ ಅಮೈ (NH-75) ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು ₹1.05 ಕೋಟಿ ಮೌಲ್ಯದ MDMA, ಕೊಕೇನ್ ಸೇರಿದಂತೆ ಮಾದಕವಸ್ತು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡು, ಬೆಂಗಳೂರಿನ ಕೆಂಗೇರಿ ನಿವಾಸಿ ಮಹಮ್ಮದ್ ಅಮೀರ್ ಜರ್ತಾಬ್ (35) ಎಂಬಾತನನ್ನು ಬಂಧಿಸಿದ್ದರು.