ಉಡುಪಿ: ಬ್ರಹ್ಮಾವರ ಸಮೀಪ ಸಂಚರಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಬಸ್‌ನಲ್ಲಿದ್ದ ಏಳು ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ.
ಉಡುಪಿಯಿಂದ ಸಾಗರದ ಕಡೆಗೆ ತೆರಳುತ್ತಿದ್ದ ಬಸ್‌ನಲ್ಲಿ ಇದ್ದಕ್ಕಿದ್ದಂತೆ ಹೊಗೆ ಕಾಣಿಸಿಕೊಂಡಿದೆ. ಪರಿಶೀಲಿಸಿದಾಗ ಬಸ್‌ನ ಎಲೆಕ್ಟ್ರಿಕಲ್ ಬಾಕ್ಸ್ ಬಳಿ ಬೆಂಕಿ ಹೊತ್ತಿಕೊಂಡಿರುವುದು ಗಮನಕ್ಕೆ ಬಂದಿದೆ. ನಂತರ ಬೆಂಕಿ ವೇಗವಾಗಿ ಹರಡಲು ಆರಂಭಿಸಿದೆ.
ಅಪಾಯದ ಸೂಚನೆ ಅರಿತ ನಿರ್ವಾಹಕರು ಕೂಡಲೇ ಬಸ್‌ನ್ನು ನಿಲ್ಲಿಸಿ, ಅದರಲ್ಲಿದ್ದ ಪ್ರಯಾಣಿಕರನ್ನು ತಕ್ಷಣವೇ ಕೆಳಗಿಳಿಸಿದ್ದಾರೆ. ಸಮಯಪ್ರಜ್ಞೆಯಿಂದ ಕೈಗೊಂಡ ಈ ಕ್ರಮದಿಂದ ಸಂಭವಿಸಬಹುದಾಗಿದ್ದ ಅನಾಹುತವೊಂದು ತಪ್ಪಿದೆ.
ಘಟನೆ ಕುರಿತು ಮಾಹಿತಿ ಲಭಿಸಿದ ತಕ್ಷಣ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದರು. ಕೆಲಕಾಲ ಕಾರ್ಯಾಚರಣೆ ನಡೆಸಿದ ಬಳಿಕ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದು ನಂದಿಸುವಲ್ಲಿ ಸಿಬ್ಬಂದಿ ಯಶಸ್ವಿಯಾದರು.





