ಮಹಾರಾಷ್ಟ್ರ: ಐಫೋನ್ ಖರೀದಿಸಿದ ಬಳಿಕ ಅದರ ಇಎಂಐ ಪಾವತಿಸಲು ಹಣ ಕೇಳಿದ ವಿಚಾರದಲ್ಲಿ ಕುಟುಂಬದಲ್ಲಿ ಉಂಟಾದ ಜಗಳ ದುರಂತಕ್ಕೆ ಕಾರಣವಾಗಿದೆ. ಮಗನನ್ನು ಸಮಾಧಾನಪಡಿಸಲು ಹೋದ ತಂದೆ-ತಾಯಿ ಸೇರಿದಂತೆ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಕುನಾಲ್ (18) ಐಫೋನ್ ಖರೀದಿಸಿದ್ದು, ಅದರ ಇಎಂಐ ಕಟ್ಟಲು ಮನೆಯವರ ಬಳಿ ಹಣ ಕೇಳಿದ್ದಾನೆ. ಈ ವಿಚಾರವಾಗಿ ತಂದೆ ಮುರುಳೀಧರ್ ಅವರೊಂದಿಗೆ ಜಗಳ ನಡೆದ ಬಳಿಕ ಕುನಾಲ್ ಮನೆಯಿಂದ ಹೊರಗೆ ಹೋಗಿದ್ದಾನೆ. ಬಳಿಕ ಬೆಟ್ಟದ ಅಂಚಿನಲ್ಲಿ ನಿಂತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ.
ಮಗನ ಮನವೊಲಿಸಲು ತಂದೆ-ತಾಯಿ ಸುಮಾರು ಮೂರು ಗಂಟೆಗಳ ಕಾಲ ಪ್ರಯತ್ನಿಸಿದ್ದಾರೆ. ಆದರೆ ಕುನಾಲ್ ಅವರ ಮಾತಿಗೆ ಒಪ್ಪದೆ ಅಲ್ಲಿಯೇ ನಿಂತಿದ್ದಾನೆ. ಈ ವೇಳೆ ಮಗನನ್ನು ಹಿಡಿದು ರಕ್ಷಿಸಲು ಮುಂದಾದ ತಂದೆ ಸಮತೋಲನ ಕಳೆದುಕೊಂಡು ಕುನಾಲ್‌ನೊಂದಿಗೆ ಪ್ರಪಾತಕ್ಕೆ ಬಿದ್ದಿದ್ದಾರೆ.
ತಂದೆ ಕೆಳಗೆ ಬಿದ್ದಿರುವುದನ್ನು ಕಂಡು ಗಾಬರಿಗೊಂಡ ತಾಯಿಯೂ ಕಾಲು ಜಾರಿ ಪ್ರಪಾತಕ್ಕೆ ಬಿದ್ದಿದ್ದಾರೆ. ಪರಿಣಾಮವಾಗಿ ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆಯ ಕುರಿತು ತನಿಖೆ ಮುಂದುವರಿಸಿದ್ದಾರೆ.





