ಮಂಗಳೂರು: ಆಹಾರ ಸುರಕ್ಷತೆ ನಿಯಮಗಳ ಉಲ್ಲಂಘನೆ ತಡೆಯಲು ಪ್ರತಿಯೊಂದು ಸಂದರ್ಭದಲ್ಲೂ ಅಧಿಕಾರಿಗಳಿಂದ ದಾಳಿ ನಡೆಸುವುದು ಸಾಧ್ಯವಿಲ್ಲ. ಹೀಗಾಗಿ ತಾಲೂಕು ಮಟ್ಟದಲ್ಲಿ ವಾಚ್‌ಟೀಮ್‌ಗಳನ್ನು ರಚಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಸಚಿವ ಯು.ಟಿ. ಖಾದರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 60 ವರ್ಷ ಮೇಲ್ಪಟ್ಟವರು ಸೇರಿದಂತೆ ಸಾಮಾಜಿಕ ಸೇವೆಯಲ್ಲಿ ಆಸಕ್ತಿ ಹೊಂದಿರುವವರನ್ನು ಈ ತಂಡಗಳಿಗೆ ಸೇರ್ಪಡೆಗೊಳಿಸುವ ಉದ್ದೇಶವಿದೆ. ಆಹಾರ ಸುರಕ್ಷತೆ ಹಾಗೂ ಆರೋಗ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ವಾಚ್‌ಟೀಮ್‌ಗಳ ಮೂಲಕ ಕೈಗೊಳ್ಳಲಾಗುವುದು ಎಂದರು.
ಕೋಳಿ ಮಾಂಸವನ್ನು ಎಷ್ಟು ದಿನಗಳವರೆಗೆ ಸಂಗ್ರಹಿಸಬಹುದು ಎಂಬುದಕ್ಕೆ ದೇಶದಲ್ಲಿ ನಿಗದಿತ ನಿಯಮಗಳಿವೆ. ಈ ಕುರಿತು ಗ್ರಾಹಕರಿಗೆ ಸ್ಪಷ್ಟ ಮಾಹಿತಿ ಸಿಗುವಂತೆ ಅಗತ್ಯ ಸ್ಥಳಗಳಲ್ಲಿ ಮಾಹಿತಿ ಫಲಕಗಳನ್ನು ಅಳವಡಿಸಬೇಕು ಎಂದು ಸಚಿವರು ಹೇಳಿದರು. ಆಹಾರ ಪದಾರ್ಥಗಳ ಗುಣಮಟ್ಟ ಮತ್ತು ಸಕ್ಕರೆ ಪ್ರಮಾಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಪರಿಣಾಮಕಾರಿ ನಿಯಮಗಳ ಅಗತ್ಯವಿದ್ದು, ಕೇಂದ್ರ ಸರ್ಕಾರವೂ ಈ ಬಗ್ಗೆ ಗಮನ ಹರಿಸಬೇಕು ಎಂದರು.
ಕೃತಕ ಪನ್ನೀರ್ ಬಳಕೆಗೆ ಕಡಿವಾಣ
ಸಸ್ಯಾಹಾರಿ ಆಹಾರಕ್ಕೆ ಹೆಚ್ಚಿನ ಬೇಡಿಕೆ ಇರುವ ಪ್ರದೇಶಗಳಲ್ಲಿ ಕೃತಕ ಪನ್ನೀರ್ ಬಳಕೆಯಾಗುತ್ತಿದೆ ಎಂಬ ದೂರುಗಳು ಬಂದಿವೆ. ರಾಜ್ಯದಲ್ಲಿ ಕೃತಕ ಪನ್ನೀರ್‌ಗೆ ನಿಷೇಧವಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಮುಂದುವರಿಸಲಾಗುವುದು ಎಂದು ಯು.ಟಿ. ಖಾದರ್ ತಿಳಿಸಿದರು.
ಆಹಾರದಲ್ಲಿ ಕೃತಕ ಬಣ್ಣ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಜಿನಮೊಟೊವನ್ನು ಸಂಪೂರ್ಣವಾಗಿ ನಿಷೇಧಿಸುವುದು ಪ್ರಾಯೋಗಿಕವಾಗಿ ಸಾಧ್ಯವಾಗದ ಕಾರಣ, ಅದರ ಬಳಕೆಯ ಕುರಿತು ಜಾರಿಯಲ್ಲಿರುವ ನಿಯಮಗಳ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದರು.
ನಿಕೋಟಿನ್‌ಯುಕ್ತ ಗುಟ್ಕಾ, ಪಾನ್‌ಮಸಾಲಾ ವಿರುದ್ಧ ಕ್ರಮ
ಗುಟ್ಕಾ ಹಾಗೂ ಪಾನ್‌ಮಸಾಲಾ ಉತ್ಪನ್ನಗಳಿಗೆ ನಿಕೋಟಿನ್ ಸೇರಿಸಿ ಮಾರಾಟ ಮಾಡುವ ಕಂಪನಿಗಳ ವಿರುದ್ಧವೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ವಿಮಾನಗಳಿಗೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಪೂರೈಸುವ ಕಂಪನಿಗಳೊಂದಿಗೆ ಈ ಕುರಿತು ಚರ್ಚೆ ನಡೆಸಲಾಗುವುದು. ನಕಲಿ ಔಷಧಗಳ ಜಾಲದ ವಿರುದ್ಧ ಎಸ್‌ಐಟಿ ತನಿಖೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಹೋಟೆಲ್‌ಗಳು, ಔಷಧ ಮಳಿಗೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಈಗಾಗಲೇ 400ಕ್ಕೂ ಅಧಿಕ ದೂರುಗಳು ಬಂದಿವೆ ಎಂದು ಸಚಿವ ಯು.ಟಿ. ಖಾದರ್ ಮಾಹಿತಿ ನೀಡಿದರು.





