ಕಣ್ಣೂರು: ಮದುವೆಯ ಸಂಭ್ರಮದಲ್ಲಿದ್ದರೂ ಕರ್ತವ್ಯ ಮರೆಯದ ಕೇರಳದ ವೈದ್ಯೆಯೊಬ್ಬರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕಣ್ಣೂರಿನ ಪಾನೂರಿನ ಡಾ. ಶಿರಿನ್ ಸುಬೈರ್ ಅವರು ಡಾ. ರಿಜಾಜ್ ಅವರೊಂದಿಗೆ ಮದುವೆಯಾಗುತ್ತಿದ್ದ ವೇಳೆ, ಮದುವೆ ಸಮಾರಂಭದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕ್ಯಾಟರಿಂಗ್ ಸಿಬ್ಬಂದಿ ಅಸ್ವಸ್ಥರಾಗಿದ್ದರು. ಒಬ್ಬರಿಗೆ ಮೂಗಿನಿಂದ ರಕ್ತಸ್ರಾವವಾಗಿದ್ದರೆ, ಮತ್ತೊಬ್ಬರಿಗೆ ತಲೆಸುತ್ತು ಬಂದು ಕುಸಿಯುವಂತಾಗಿತ್ತು.
ವೈದ್ಯೆಯಾಗಿರುವ ಶಿರಿನ್ ಅವರಿಗೆ ವಿಷಯ ತಿಳಿದ ತಕ್ಷಣ ಮದುವೆಯ ಸಂಭ್ರಮವನ್ನು ಬದಿಗಿಟ್ಟು ಸ್ಥಳಕ್ಕೆ ತೆರಳಿ ಇಬ್ಬರಿಗೂ ಪ್ರಾಥಮಿಕ ಚಿಕಿತ್ಸೆ ನೀಡಿದರು. ಅಗತ್ಯವಿದ್ದರೆ ಆಸ್ಪತ್ರೆಗೆ ಕರೆದೊಯ್ಯುವಂತೆ ಕೂಡ ಸಲಹೆ ನೀಡಿದರು.
ಶಿರಿನ್ ಅವರು ವಲ್ಲುವನಾಡ್ ಆಸ್ಪತ್ರೆ, ಒಟ್ಟಪ್ಪಾಲಂನಲ್ಲಿ ತುರ್ತು ವೈದ್ಯಕೀಯ ವಿಭಾಗದಲ್ಲಿ ಮೊದಲ ವರ್ಷದ MD ವ್ಯಾಸಂಗ ಮಾಡುತ್ತಿದ್ದಾರೆ.
ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮದುವೆಯ ನಡುವೆಯೂ ಅಸ್ವಸ್ಥರಿಗೆ ತಕ್ಷಣ ನೆರವಾದ ಶಿರಿನ್ ಅವರ ಕಾರ್ಯಕ್ಕೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಆದರೆ ಶಿರಿನ್ ಅವರು ಇದನ್ನು ದೊಡ್ಡ ವಿಷಯವೆಂದು ಪರಿಗಣಿಸಿಲ್ಲ. ಅಗತ್ಯವಿದ್ದಾಗ ವೈದ್ಯರಾಗಿ ಸಹಾಯ ಮಾಡುವುದು ತಮ್ಮ ಕರ್ತವ್ಯ ಎಂದು ಅವರು ಹೇಳಿದ್ದಾರೆ.





