ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಹೆರಿಗೆ ಆಸ್ಪತ್ರೆಯ ಆವರಣದಲ್ಲಿ ಡ್ಯಾನ್ಸ್ ಕಲಾವಿದರು ಕಾರ್ಯಕ್ರಮವೊಂದಕ್ಕೆ ಸಿದ್ಧತೆ ನಡೆಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದೀಗ ವಿವಾದಕ್ಕೆ ಕಾರಣವಾಗಿವೆ.
ಕಾಂಗ್ರೆಸ್ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರ ತಾಯಿಯ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಡ್ಯಾನ್ಸ್ ಕಲಾವಿದರಿಗೆ ಆಸ್ಪತ್ರೆಯ ಆವರಣದಲ್ಲಿ ಸಿದ್ಧತೆ ನಡೆಸಲು ಅವಕಾಶ ನೀಡಲಾಗಿತ್ತು ಎಂದು ಆರೋಪಿಸಲಾಗಿದೆ.
ಈ ವೇಳೆ ಮಹಿಳಾ ಕಲಾವಿದೆಯೊಬ್ಬರು ಆಸ್ಪತ್ರೆಯೊಳಗೆ ರೀಲ್ಸ್ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದು ಕೂಡ ಚರ್ಚೆಗೆ ಕಾರಣವಾಗಿದೆ.
ಆಸ್ಪತ್ರೆಯಂತಹ ಆರೋಗ್ಯ ಸೇವೆ ನಡೆಯುವ ಸ್ಥಳದಲ್ಲಿ ಇಂತಹ ಚಟುವಟಿಕೆಗಳಿಗೆ ಅನುಮತಿ ನೀಡಿದ್ದು ಹೇಗೆ ಎಂಬ ಪ್ರಶ್ನೆಗಳು ಇದೀಗ ಕೇಳಿಬರುತ್ತಿವೆ. ಈ ಚಟುವಟಿಕೆಗಳಿಂದ ಆಸ್ಪತ್ರೆಯಲ್ಲಿನ ರೋಗಿಗಳು ಹಾಗೂ ಆರೋಗ್ಯ ಸೇವೆಗೆ ಯಾವುದೇ ತೊಂದರೆ ಉಂಟಾಗಿತ್ತೇ ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಆಸ್ಪತ್ರೆ ಆವರಣದಲ್ಲಿ ಕಾರ್ಯಕ್ರಮಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಅನುಮತಿ ನೀಡಿದವರು ಯಾರು ಎಂಬುದರ ಕುರಿತು ಸ್ಪಷ್ಟನೆ ನೀಡಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ.





