05 September 2026 |

ಸಾರ್ವಜನಿಕರ ಗಮನಕ್ಕೆ: ಸೆ.5ರಂದು ಮಂಗಳೂರು ನಗರದಲ್ಲಿ ಮೊಸರುಕುಡಿಕೆ - ಹಲವು ರಸ್ತೆಗಳಲ್ಲಿ ಸಂಚಾರ ಮಾರ್ಗ ಬದಲಾವಣೆ

  • 04 Sep 2026 06:30:08 PM

ಮಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 5ರಂದು ಮಂಗಳೂರು ನಗರದ ವಿವಿಧ ಭಾಗಗಳಲ್ಲಿ ಮೊಸರುಕುಡಿಕೆ ಕಾರ್ಯಕ್ರಮಗಳು ಹಾಗೂ ಮೆರವಣಿಗೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಸಂಜೆ 5 ಗಂಟೆಯಿಂದ ಕೆಲವು ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಇಲಾಖೆ ತಿಳಿಸಿದೆ.

 

ತೊಕ್ಕೊಟ್ಟು, ಕದ್ರಿ ಕಂಬಳ, ಅತ್ತಾವರ ಮತ್ತು ಕೊಟ್ಟಾರ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಹನ ಸಂಚಾರ ಉಂಟಾಗುವ ನಿರೀಕ್ಷೆಯಿದೆ. ಹೀಗಾಗಿ ವಾಹನ ಸವಾರರು ಸಾಧ್ಯವಾದಷ್ಟು ಪರ್ಯಾಯ ರಸ್ತೆಗಳನ್ನು ಬಳಸುವಂತೆ ಪೊಲೀಸರು ಸೂಚಿಸಿದ್ದಾರೆ. ಮೆರವಣಿಗೆ ನಡೆಯುವ ಮಾರ್ಗಗಳಲ್ಲಿ ಹಾಗೂ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡದಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.

 

ವಾಹನ ದಟ್ಟಣೆ ಉಂಟಾಗುವ ಸಾಧ್ಯತೆ ಇರುವ ಪ್ರದೇಶಗಳು ಹಾಗೂ ಪರ್ಯಾಯ ಮಾರ್ಗಗಳು:

 

1. ತೊಕ್ಕೊಟ್ಟು ಒಳಪೇಟೆ ಮೊಸರುಕುಡಿಕೆ

ರಾಷ್ಟ್ರೀಯ ಹೆದ್ದಾರಿ-66ರ ತೊಕ್ಕೊಟ್ಟು ಜಂಕ್ಷನ್‌ನಿಂದ ಕೊಲ್ಯ ಜಂಕ್ಷನ್‌ವರೆಗೆ, ಹಾಗೆಯೇ ಉಳ್ಳಾಲ ಅಬ್ಬಕ್ಕ ವೃತ್ತ ಮತ್ತು ತೊಕ್ಕೊಟ್ಟು ಒಳಪೇಟೆ ಭಾಗದಲ್ಲಿ ವಾಹನ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದೆ.

 

ಪರ್ಯಾಯ ಮಾರ್ಗ:

- ತೊಕ್ಕೊಟ್ಟು ಜಂಕ್ಷನ್ ಮೂಲಕ ತಲಪಾಡಿ ಕಡೆಗೆ ತೆರಳುವ ವಾಹನಗಳು ಸರ್ವಿಸ್ ರಸ್ತೆಗೆ ಎಡಕ್ಕೆ ತಿರುಗಿ, ದೇರಳಕಟ್ಟೆ ಜಂಕ್ಷನ್‌ನಲ್ಲಿ ಬಲಕ್ಕೆ ತಿರುಗಬೇಕು. ಅಲ್ಲಿಂದ ಮಡ್ಯಾರ್–ಮಾಡೂರು–ಬೀರಿಕೋಟೆಕಾರ್ ಜಂಕ್ಷನ್ ಮಾರ್ಗವಾಗಿ ಸಂಚರಿಸಬಹುದು.

- ತೊಕ್ಕೊಟ್ಟು ಜಂಕ್ಷನ್‌ನಿಂದ ಉಳ್ಳಾಲ ಅಬ್ಬಕ್ಕ ವೃತ್ತ ಅಥವಾ ತೊಕ್ಕೊಟ್ಟು ಒಳಪೇಟೆ ಕಡೆಗೆ ತೆರಳುವ ವಾಹನಗಳು ಬೀರಿಕೋಟೆಕಾರ್–ಸೋಮೇಶ್ವರ ಮಾರ್ಗವನ್ನು ಬಳಸಬಹುದು.

 

2. ಕದ್ರಿ ಶ್ರೀ ಗೋಪಾಲಕೃಷ್ಣ ಮಠ, ಕದ್ರಿ ಕಂಬಳ ಮೊಸರುಕುಡಿಕೆ

ಬಟ್ಟಗುಡ್ಡೆ ಜಂಕ್ಷನ್‌ನಿಂದ ಕದ್ರಿ ಕಂಬಳ ಮೂಲಕ ಭಾರತ್ ಬೀಡಿ ಪ್ರದೇಶದವರೆಗೆ ವಾಹನಗಳ ಸಂಚಾರ ನಿಧಾನಗೊಳ್ಳುವ ಸಾಧ್ಯತೆ ಇದೆ.

 

ಪರ್ಯಾಯ ಮಾರ್ಗ:

- ಬಟ್ಟಗುಡ್ಡೆ ಕಡೆಯಿಂದ ಕದ್ರಿ ಕಂಬಳಕ್ಕೆ ಹೋಗುವ ವಾಹನಗಳು ಬಿಜೈ ಜಂಕ್ಷನ್–ಪಿಂಟೋ ಬೇಕರಿ–ಕರಂಗಲಪಾಡಿ ಮಾರ್ಗವನ್ನು ಬಳಸಬಹುದು.

- ಭಾರತ್ ಬೀಡಿ ಕಡೆಯಿಂದ ಬಟ್ಟಗುಡ್ಡೆ ಕಡೆಗೆ ತೆರಳುವ ವಾಹನಗಳು ಮಲ್ಲಿಕಟ್ಟೆ–ನಂತೂರು ಮಾರ್ಗದಲ್ಲಿ ಸಂಚರಿಸಬಹುದು.

 

3. ಶ್ರೀ ಅರಸು ಮುಂಡತ್ತಾಯ ಮೈದಾನ, ಅತ್ತಾವರ ಮೊಸರುಕುಡಿಕೆ

ಕೋಟಿಚೆನ್ನಯ ವೃತ್ತದಿಂದ ಬಾಬುಗುಡ್ಡೆ, ಅತ್ತಾವರ ಕೆ.ಎಂ.ಸಿ. ರಸ್ತೆ ಮೂಲಕ ಆನಂದ ಶೆಟ್ಟಿ ವೃತ್ತದವರೆಗೆ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ.

 

ಪರ್ಯಾಯ ಮಾರ್ಗ:

- ಕೋಟಿಚೆನ್ನಯ ವೃತ್ತದಿಂದ ಅತ್ತಾವರ ಕಡೆಗೆ ತೆರಳುವ ವಾಹನಗಳು ವೆಲೆನ್ಸಿಯಾ ಮಾರ್ಗವನ್ನು ಬಳಸಬಹುದು.

- ಅತ್ತಾವರದಿಂದ ಕೋಟಿಚೆನ್ನಯ ವೃತ್ತದ ಕಡೆಗೆ ಬರುವ ವಾಹನಗಳು ಆನಂದ ಶೆಟ್ಟಿ ವೃತ್ತದಲ್ಲಿ ಎಡಕ್ಕೆ ತಿರುಗಿ, ಎಸ್.ಎಲ್. ಮಥಾಯಸ್ ರಸ್ತೆ–ಹೈಲ್ಯಾಂಡ್ ಜಂಕ್ಷನ್ ಮೂಲಕ ಸಾಗಬಹುದು.

 

4. ಶ್ರೀ ಕೃಷ್ಣ ಜ್ಞಾನೋದಯ ಭಜನಾ ಮಂದಿರ, ಕೊಟ್ಟಾರ ಮೊಸರುಕುಡಿಕೆ

ಕೊಟ್ಟಾರ ಚೌಕಿಯಿಂದ ಉರ್ವಸ್ಟೋರ್ ಜಂಕ್ಷನ್‌ವರೆಗೆ ವಾಹನ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದೆ.

 

ಪರ್ಯಾಯ ಮಾರ್ಗ:

- ಲಾಲ್‌ಬಾಗ್ ಅಥವಾ ನಾರಾಯಣಗುರು ವೃತ್ತದಿಂದ ಕೊಟ್ಟಾರ ಚೌಕಿಗೆ ತೆರಳುವ ವಾಹನಗಳು ಕೆ.ಎಸ್.ಆರ್.ಟಿ.ಸಿ.–ಕುಂಟಿಕಾನ ಮಾರ್ಗ ಬಳಸಬಹುದು.

- ಕೊಟ್ಟಾರ ಚೌಕಿಯಿಂದ ಲಾಲ್‌ಬಾಗ್ ಕಡೆಗೆ ತೆರಳುವ ಲಘು ವಾಹನಗಳು ಕುಂಟಿಕಾನ–ಬಿಜೈ–ಕೆ.ಎಸ್.ಆರ್.ಟಿ.ಸಿ. ಮಾರ್ಗದಲ್ಲಿ ಸಂಚರಿಸಬಹುದು.

- ಇದೇ ಮಾರ್ಗದಲ್ಲಿ ತೆರಳುವ ಘನ ವಾಹನಗಳು ಕುಂಟಿಕಾನ–ಕೆ.ಪಿ.ಟಿ. ವೃತ್ತ ಮಾರ್ಗವನ್ನು ಬಳಸುವಂತೆ ಸೂಚಿಸಲಾಗಿದೆ.

 

ಮೊಸರುಕುಡಿಕೆ ಕಾರ್ಯಕ್ರಮಗಳು ಮತ್ತು ಮೆರವಣಿಗೆಗಳ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಸುಗಮ ಸಂಚಾರ ವ್ಯವಸ್ಥೆಗಾಗಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ.