05 September 2026 |

ನಿಂತಿದ್ದ ಲಾರಿಗೆ ಕಾರು ಡಿಕ್ಕಿ; ಎಂಟು ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಾವು

  • 05 Sep 2026 10:05:39 AM

ತಿರುವನಂತಪುರಂ: ನಿಂತಿದ್ದ ಗೂಡ್ಸ್ ಲಾರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಎಂಟು ಮಂದಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಕೇರಳದ ತ್ರಿಶೂರು ಜಿಲ್ಲೆಯಲ್ಲಿ ನಡೆದಿದೆ.

 

ಮೃತರ ಪೈಕಿ ಐವರನ್ನು ತಮಿಳುನಾಡಿನ ಸೇಲಂ ಮೂಲದ ವಿಶ್ವ (20), ದಿಂಡಿಗಲ್ ಮೂಲದ ಸೂರ್ಯ (20) ಹಾಗೂ ಯುವಸಂಜಿತ್ (20), ಮಧುರೈನ ಸಂತೋಷ್ (20) ಮತ್ತು ಪ್ರಸನ್ನ ಎಂದು ಗುರುತಿಸಲಾಗಿದೆ. ಇನ್ನೂ ಮೂವರು ಮೃತರ ಗುರುತು ಪತ್ತೆಯಾಗಿಲ್ಲ. ಮೃತಪಟ್ಟವರೆಲ್ಲರೂ ದಿಂಡಿಗಲ್‌ನ ಪಿ.ಎಸ್.ಎಂ. ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದವರು ಎಂದು ತಿಳಿದುಬಂದಿದೆ.

 

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಕೈಪಮಂಗಲಂ ಸಮೀಪದ ಪನಂಬಿಕ್ಕುನ್ನು ಸೆಂಟರ್ ಬಳಿ ರಸ್ತೆ ತಿರುವಿನಲ್ಲಿ ಗೂಡ್ಸ್ ಲಾರಿಯನ್ನು ನಿಲ್ಲಿಸಲಾಗಿತ್ತು. ಮಧ್ಯರಾತ್ರಿ ವೇಳೆಗೆ ತಮಿಳುನಾಡು ನೋಂದಣಿಯ ಕಾರು ಆ ಮಾರ್ಗವಾಗಿ ಸಾಗುತ್ತಿದ್ದಾಗ ನಿಯಂತ್ರಣ ತಪ್ಪಿ ಲಾರಿಯ ಹಿಂಭಾಗಕ್ಕೆ ವೇಗವಾಗಿ ಡಿಕ್ಕಿ ಹೊಡೆದಿದೆ.

 

ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ಅದರಲ್ಲಿದ್ದವರು ಒಳಗೆ ಸಿಲುಕಿಕೊಂಡಿದ್ದರು. ಮಾಹಿತಿ ಪಡೆದ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದರು. ಕಾರಿನ ಬಿಡಿಭಾಗಗಳನ್ನು ಕತ್ತರಿಸಿ ಮೃತದೇಹಗಳನ್ನು ಹೊರತೆಗೆಯಲಾಯಿತು.

 

ಘಟನೆಯ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತದ ಕುರಿತು ತನಿಖೆ ಮುಂದುವರಿಸಿದ್ದಾರೆ.