05 September 2026 |

ಕಾಸರಗೋಡಿನಲ್ಲಿ ಧ್ವಜಸ್ತಂಭದ ಹಗ್ಗ ಕುತ್ತಿಗೆಗೆ ಸಿಲುಕಿ 11 ವರ್ಷದ ಬಾಲಕ ಸಾವು

  • 05 Sep 2026 10:02:43 AM

ಕಾಸರಗೋಡು: ಮನೆಯ ಸಮೀಪದ ಅಂಗನವಾಡಿ ಮೈದಾನದಲ್ಲಿ ಆಟವಾಡುತ್ತಿದ್ದ 11 ವರ್ಷದ ಬಾಲಕನೊಬ್ಬ ಧ್ವಜಸ್ತಂಭದ ಹಗ್ಗ ಕುತ್ತಿಗೆಗೆ ಸಿಲುಕಿದ ಪರಿಣಾಮ ಮೃತಪಟ್ಟಿರುವ ದಾರುಣ ಘಟನೆ ಮಡಿಕೈ ಪಂಚಾಯತ್ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.

 

ಚೇರಂತಲಾ ವಾರ್ಡ್‌ನ ನಿವಾಸಿಗಳಾದ ರಾಜೇಶ್ ಮತ್ತು ನೀತು ದಂಪತಿಯ ಏಕೈಕ ಪುತ್ರ ಅನೇಕ್ (11) ಮೃತ ಬಾಲಕ. ಕರಪೊಯಿಲ್ ಸರ್ಕಾರಿ ಪ್ರೌಢಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅನೇಕ್, ಶಾಲೆ ಮುಗಿಸಿ ಮನೆಗೆ ಮರಳಿದ ಬಳಿಕ ಸಂಜೆ ಸುಮಾರು 4.45ಕ್ಕೆ ನಂದನ್‌ಕುಳಿ ಅಂಗನವಾಡಿ ಸಮೀಪದ ಮೈದಾನಕ್ಕೆ ಆಟವಾಡಲು ತೆರಳಿದ್ದ.

 

ಅನೇಕ್ ಸಾಮಾನ್ಯವಾಗಿ ನೆರೆಹೊರೆಯ ಮಕ್ಕಳೊಂದಿಗೆ ಮೈದಾನದಲ್ಲಿ ಆಟವಾಡುತ್ತಿದ್ದ. ಆದರೆ ಅಂದು ಆ ಮಕ್ಕಳು ಶಾಲೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕಾರಣ, ಬಾಲಕ ಮೈದಾನದಲ್ಲಿ ಒಬ್ಬನೇ ಇದ್ದ ಎನ್ನಲಾಗಿದೆ. ಧ್ವಜಸ್ತಂಭದ ಸುತ್ತಮುತ್ತ ಆಟವಾಡುತ್ತಿದ್ದ ಸಂದರ್ಭದಲ್ಲಿ ಅದರ ಹಗ್ಗ ಆಕಸ್ಮಿಕವಾಗಿ ಆತನ ಕುತ್ತಿಗೆಗೆ ಸಿಲುಕಿಕೊಂಡಿದೆ.

 

ಈ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಆಟೋರಿಕ್ಷಾ ಚಾಲಕರೊಬ್ಬರು ಧ್ವಜಸ್ತಂಭದ ಬಳಿ ಬಾಲಕ ಬಿದ್ದಿರುವುದನ್ನು ಗಮನಿಸಿದ್ದಾರೆ. ಕೂಡಲೇ ಅವರು ಸ್ಥಳೀಯರಿಗೆ ವಿಷಯ ತಿಳಿಸಿದ್ದು, ಸ್ಥಳೀಯರು ಧಾವಿಸಿ ಬಾಲಕನನ್ನು ಹಗ್ಗದಿಂದ ಬಿಡಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

 

ಆದರೆ ಆಸ್ಪತ್ರೆಯಲ್ಲಿ ಬಾಲಕನನ್ನು ಪರೀಕ್ಷಿಸಿದ ವೈದ್ಯರು, ಆತ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಅನೇಕ್‌ನ ಅಕಾಲಿಕ ಸಾವಿನಿಂದ ಕುಟುಂಬಸ್ಥರು ಮಾತ್ರವಲ್ಲದೆ ಗ್ರಾಮಸ್ಥರೂ ಆಘಾತಕ್ಕೊಳಗಾಗಿದ್ದು, ಸ್ಥಳದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

 

ಘಟನೆ ಕುರಿತು ಕಂಞಂಗಾಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.